ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಮೆಡಿಕಲ್ ವಿದ್ಯಾರ್ಥಿಗಳ ಪರೀಕ್ಷಾ ಸಾಧನವಾಗಿದ್ದಾರೆ

ನೊಂದವರ ಆರೋಪ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಜಿಲ್ಲಾಸ್ಪತ್ರೆ ಸರ್ಕಾರಿ ವೈದ್ಯಕೀಯ ಕಾಲೇಜ್ ಆಗಿ ಪರಿವರ್ತನೆಯಾಗುತ್ತಿದ್ದಂತೆ ರೋಗಿಗಳನ್ನು ಮೆಡಿಕಲ್ ವಿದ್ಯಾರ್ಥಿಗಳ ಪರೀಕ್ಷಾ ಸಾಧನದಂತೆ ಬಳಸಿಕೊಳ್ಳುವ ಯತ್ನ ನಡೆಸಲಾಗುತ್ತಿದೆ ಎಂಬ ಗಂಭೀರ ಆಪಾದನೆ ಸಾರ್ವಜನಿಕರಿಂದ ಕೇಳಿಬಂದಿದೆ.

ಇತ್ತೀಚೆಗೆ ನಗರದ ಹಬ್ಬುವಾಡ ನಿವಾಸಿ ಸತ್ಯಾನಂದ ಪ್ರಭು ಎಂಬುವವರು ಮಗನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿತ್ತು. ಗಾಯಗೊಂಡ ಅವರು ಹಾಗೂ ಪುತ್ರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿನ ಕೆಲವು ವೈದ್ಯರ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಸತ್ಯಾನಂದ ಪ್ರಭು, “ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಯಾವುದಕ್ಕೂ ಸೂಕ್ತ ಸ್ಪಂದನೆ ನೀಡುತ್ತಿರÀಲಿಲ್ಲ. ಕೆಲವು ಸಮಯದ ಬಳಿಕ ಮಗನನ್ನು ಪರೀಕ್ಷಿಸಿದ ವೈದ್ಯರು ಕಾಲು ಉಳುಕಿದ್ದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಸೂಚಿಸಿದರು. ಮನೆಗೆ ಅಥವಾ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಬಿಡದೆ ಶಸ್ತ್ರಚಿಕಿತ್ಸೆ ಮಾಡುವಂತೆ ತೀರಾ ಬಲವಂತ ಮಾಡಿದರು. ಆದರೂ ಆ ಬಗ್ಗೆ ಕ್ಯಾರ್ ಮಾಡದೇ ಮಗನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದೆ. ಒಂದೇ ದಿನದೊಳಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡದೇ ಔಷಧದ ಮೂಲಕ ಉಳುಕಿರುವ ಕಾಲನ್ನು ಸರಿ ಮಾಡಿಸಿ, ಮನೆಗೆ ಕರೆತಂದೆ. ಜಿಲ್ಲಾಸ್ಪತ್ರೆಯ ವೈದ್ಯರ ಮಾತು ಕೇಳಿದರೆ ಇಲ್ಲಿನ ಮೆಡಿಕಲ್ ವಿದ್ಯಾರ್ಥಿಗಳ ಪರೀಕ್ಷೆಗೆ ನನ್ನ ಮಗನ ಕಾಲಿಗೆ ತೊಂದರೆಯಾಗುವ ಸ್ಥಿತಿ ಎದುರಾಗುತ್ತಿತ್ತು. ಬಡವರು, ನಿರ್ಗತಿಕರು ಈ ಆಸ್ಪತ್ರೆಗೆ ಬರುವಾಗ ಬಹಳ ಗಮನ ಹರಿಸಬೇಕು. ಇಲ್ಲವಾದರೆ ಈ ಪರೀಕ್ಷೆಯ ನೆಪದಲ್ಲಿ ರೋಗಿಗಳಿಗೆ ಇನ್ನಷ್ಟು ಸಮಸ್ಯೆಗಳನ್ನು ತಂದಿಡುವಲ್ಲಿ ಈ ವೈದ್ಯರು ಹಿಂಜರಿಯುವುದಿಲ್ಲ” ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

“ನನ್ನ ಪುತ್ರ ದಾಖಲಾದ ಕೊಠಡಿಯಲ್ಲಿನ ಮಂಚದಲ್ಲಿ ಬೆಕ್ಕುಗಳು ಆಶ್ರಯ ಪಡೆದಿದ್ದವು. ಇತರೆ ಎಲ್ಲ ಹಾಸಿಗೆಗಳಲ್ಲಿ ರೋಗಿಗಳಿರುವುದರಿಂದ ತಮ್ಮ ಮಗನನ್ನು ಮಲಗಿಸಲು ಸ್ಥಳಾವಕಾಶ ಸಿಕ್ಕಿರಲಿಲ್ಲ. ಬೆಕ್ಕುಗಳನ್ನು ಓಡಿಸಿ ಹಾಸಿಗೆಯನ್ನು ಸ್ವಚ್ಛಗೊಳಿಸುವಂತೆ ಮನವಿ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ತಮ್ಮ ಮಾತು ಆಲಿಸಲಿಲ್ಲ” ಎಂದು ದೂರಿದ್ದಾರೆ. ಅಲ್ಲದೇ ಜಿಲ್ಲಾಸ್ಪತ್ರೆಯಲ್ಲಿನ ಹಾಸಿಗೆಗಳ ಮೇಲೆ ಬೆಕ್ಕುಗಳು ಮಲಗಿರುವ ಚಿತ್ರವನ್ನು ಸಾಮಾಜಿಕ ತಾಣಗಳಿಗೆ ಹರಿಬಿಡುವ ಮೂಲಕ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿದ್ದಾರೆ.