ಔಷಧಿ ಇಲ್ಲದ ಕದ್ರಿ ಇ ಎಸ್ ಐ ಆಸ್ಪತ್ರೆ ಎದುರು ರೋಗಿ ಧರಣಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತನಗೆ ಬೇಕಾದ ಔಷಧಿ ಆಸ್ಪತ್ರೆಯಲ್ಲಿ ದೊರಕದ ಕಾರಣ ನೊಂದ ರೋಗಿಯೊಬ್ಬರು ಕದ್ರಿ ಶಿವಭಾಗ್ ಇ ಎಸ್ ಐ ಆಸ್ಪತ್ರೆಯ ಮುಂಭಾಗದಲ್ಲೇ ಧರಣಿ ಕುಳಿತ ಘಟನೆ ಶುಕ್ರವಾರ ನಡೆಯಿತು. ಇವರ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಯ ಕೆಲವರು ಬೆಂಬಲ ವ್ಯಕ್ತಪಡಿಸಿದ್ದು, ಕೊನೆಗೆ ಇ ಎಸ್ ಐ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ ಅಶೋಕಕುಮಾರ್ ಅವರು ಔಷಧಿ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.

ಮೂಡುಬಿದಿರೆಯ ಯುವರಾಜ್ ಬಲ್ಲಾಳ್ ಹೆಸರಿನ ಇ ಎಸ್ ಐ ಆಸ್ಪತ್ರೆಯ ರೋಗಿ ಆಸ್ಪತ್ರೆಯ ವಿರುದ್ಧ ಸಿಡಿದೆದ್ದವರು. 2014ರಲ್ಲಿ ಯುವರಾಜ್ ಬಲ್ಲಾಳ್ ಜ್ವರಪೀಡಿತರಾಗಿ ಖಾಸಗಿ ಆಸ್ಪತ್ರೆಯ ವೈದ್ಯರ ಬಳಿಕ ತೆರಳಿ ಸ್ಕ್ಯಾನ್ ಮಾಡಿದಾಗ ಶ್ವಾಸ ಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಬಳಿಕ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಅಕ್ಟೋಬರ್ 5, 2016ರಲ್ಲಿ ಕುಲಶೇಖರದಲ್ಲಿರುವ ಇ ಎಸ್ ಐ ಡಿಸ್ಪೆನ್ಸರಿಗೆ ತೆರಳಿದಾಗ ಇವರಿಗೆ ಬೇಕಾಗಿದ್ದ ಔಷಧಿ ಸಿಗಲಿಲ್ಲ. ಈಗ ಔಷಧಿ ಸ್ಟಾಕಿಲ್ಲ. ಒಂದು ತಿಂಗಳ ಬಳಿಕ ಬರುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು. ಆದರೆ ಒಂದು ತಿಂಗಳ ಬಳಿಕ ಬಂದು ಅವರು ಔಷಧಿ ಕೇಳಿದಾಗಲೂ ಔಷಧಿ ಬಂದಿರಲಿಲ್ಲ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ಯುವರಾಜ್ ತಮಗೆ ಬೇಕಾದ ಔಷಧಿಗಳನ್ನು ಖರೀದಿಸುವಷ್ಟು ಸ್ಥಿತಿವಂತರಾಗಿರಲಿಲ್ಲ. ಇದರಿಂದ ಆಸ್ಪತ್ರೆಯ ಬೇಜವಾಬ್ದಾರಿ ನೀತಿ ಖಂಡಿಸಿ ಅವರು ಆಸ್ಪತ್ರೆ ಮುಂಭಾಗದಲ್ಲೇ ಪ್ರತಿಭಟನೆ ನಡೆಸಿದರು.

“ನಾನು ಆರ್ಥಿಕವಾಗಿ ಬಡವನಿದ್ದೇನೆ. ದುಬಾರಿ ದರದ ಔಷಧಿ ಖರೀದಿಸಲು ನನ್ನಿಂದ ಸಾಧ್ಯವಿಲ್ಲ. ಇಲ್ಲಿ ಸಿಗುವ ಔಷಧಿಯೇ ನನಗೆ ಆಧಾರ. ಕಳೆದ ಒಂದೂವರೆ ತಿಂಗಳಿನಿಂದ ಔಷಧಿಗಾಗಿ ಕಾಯುತ್ತಿದ್ದೇನೆ” ಎಂದು ಯುವರಾಜ್ ಬಲ್ಲಾಳ್ ವಿಷಾದದಿಂದ ಹೇಳಿದ್ದಾರೆ.

ಯುವರಾಜ ಬಲ್ಲಾಳ್ ಇ ಎಸ್ ಐ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದ ಕಾರ್ಮಿಕ ಮುಖಂಡರಾದ ಸುದತ್ತ ಜೈನ್, ಹರೀಶ್ ಶೆಟ್ಟಿ, ಹುಸೈನ್ ಮೊದಲಾದವರು ಅಲ್ಲಿಗೆ ಆಗಮಿಸಿ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಬಲ್ಲಾಳರಿಗೆ ಔಷಧಿಯ ವ್ಯವಸ್ಥೆಯನ್ನು ಮಾಡಿಕೊಡುವಂತೆ ಆಗ್ರಹಿಸಿದರು.ಬಳಿಕ ಅಲ್ಲಿಗೆ ಆಗಮಿಸಿದ ಆಸ್ಪತ್ರೆ ಅಧಿಕ್ಷಕ ಡಾ ಅಶೋಕಕುಮಾರ್ ಈ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಬಲ್ಲಾಳ್ ತನ್ನ ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.