ಭೂಗರ್ಭದಿಂದ ನೀರು ತೆಗೆಯುವುದು ಸುಲಭವಲ್ಲ

ಬೆಂಗಳೂರು : ಭೂಗರ್ಭದಿಂದ ನೀರು ತೆಗೆಯುವ ಪಾತಾಳಗಂಗೆ ಯೋಜನೆಗೆ ತೀವ್ರ ಪ್ರತಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಯೋಜನೆಯನ್ನು ನಿಧಾನಗತಿಯಲ್ಲಿ ಜಾರಿಗೊಳಿಸುತ್ತಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್ ಕೆ ಪಾಟೀಲ್ ಈ ಕುರಿತು ಪ್ರಸ್ತಾಪಿಸಿದ್ದು ತಜ್ಞರೊಡನೆ ಮತ್ತೊಂದು ಸುತ್ತು ಸಮಾಲೋಚನೆ ನಡೆಸಿದ ನಂತರ  ನೀರನ್ನು ಭೂಗರ್ಭದಿಂದ ಹೊರತೆಗೆಯುವ ಯೋಜನೆಯ ಬಗ್ಗೆ ಪುನರಾಲೋಚನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಎಲ್ಲ ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿದ ನಂತರವೇ ಸಚಿವ ಸಂಪುಟ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಟೀಲ್ ಹೇಳಿದ್ದಾರೆ.

ವಾಟರ್ ಕ್ವೆಸ್ಟ್ ಎಂಬ ಕಂಪನಿಯ ಈ ಪ್ರಸ್ತಾವನೆಯ ಅನ್ವಯ ಸಮುದ್ರದ ನೀರು ಭೂಗರ್ಭದೊಳಗೆ ಸೇರಿ ಆವಿಯಾಗುವ ಹಂತದಲ್ಲಿ ಆ ನೀರನ್ನು ಹೊರತೆಗೆದು ಬಳಕೆಗೆ ಅನುಗೊಳಿಸಲಾಗುತ್ತದೆ. ಭೂಗರ್ಭದೊಳಗೆ ಮುನ್ನೂರರಿಂದ ಎಂಟು ನೂರು ಮೀಟರ್ ಆಳದಲ್ಲಿ ಸಿಗುವ ನೀರನ್ನು ಅಲ್ಲಿಯೇ ಧೃವೀಕರಣಗೊಳಿಸಲಾಗುತ್ತದೆ.

ಈ ತಂತ್ರಜ್ಞಾನಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯಗಳಿಗೆ ಇದು ಉತ್ತಮ ಮಾರ್ಗ ಎಂದು ಹೇಳಿದೆ.

ಈ ಯೋಜನೆಯನ್ನು ನಿರ್ವಹಿಸುವ ಕಂಪನಿ ಮೊದಲು ಒಂದೆಡೆ ನೀರನ್ನು ಹೊರತೆಗೆದು ಸಮರ್ಥವಾಗಿ ಕಾರ್ಯನಿರ್ವಹಿಸಿದ ನಂತರವೇ ಸರ್ಕಾರ ಗುತ್ತಿಗೆ ನೀಡಲು ಒಪ್ಪಿದೆ ಎಂದು ಸಚಿವ ಹೇಳಿದ್ದಾರೆ.

ಸಾಕಷ್ಟು ಪ್ರತಿರೋಧದ ನಡುವೆಯೂ ಸಾರ್ವಜನಿಕರ ಒಂದು ವರ್ಗ ಈ ಯೋಜನೆಯನ್ನು ಪ್ತಯತ್ನಿಸಲು ಬೆಂಬಲಿಸುತ್ತಿದೆ. ಬೋರ್‍ವೆಲ್ ತಂತ್ರಜ್ಞಾನದಂತೆಯೇ ಇದೂ ಸಹ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಬಹುದು ಎಂಬ ಆಶಯವನ್ನೂ ವ್ಯಕ್ತಪಡಿಸಲಾಗುತ್ತಿದೆ.

ಶತಮಾನಗಳಿಂದ ಭೂಗರ್ಭದಲ್ಲಿ ಪಳೆಯುಳಿಕೆಯಲ್ಲಿ ನೀರನ್ನು ಹೊರತೆಗೆಯುವ ಈ ಯೋಜನೆ ಜನತೆಯ ಪ್ರತಿರೋಧದ ಕಾರಣ ಸದ್ಯಕ್ಕೆ ಸ್ಥಗಿತಗೊಂಡಿದೆ.