ದಲಿತರ ಶೌಚಾಲಯ ನಿರ್ಮಾಣ ತಡೆದ ಪಟೇಲ ಸಮಯದಾಯ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆರೆದ ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯಲು ಕೋಟಿಗಟ್ಟಲೆ ರೂ ಅನುದಾನವನ್ನು ಸರ್ಕಾರದಿಂದ ನೀಡುತ್ತಿರುವ ಸಂದರ್ಭದಲ್ಲಿ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಛಾತರಪುರದಲ್ಲಿ ದಲಿತರಿಗೆ ಶೌಚಾಲಯ ಕಟ್ಟುವುದನ್ನು ಉನ್ನತ ವರ್ಗದವರು ತಡೆಯುತ್ತಿರುವುದಾಗಿ ವರದಿಯಾಗಿದೆ.

ಪ್ರಭಾವಿ ಪಟೇಲ್ ಸಮುದಾಯ ತಾವು ಮನೆಯ ಹೊರಗೆ ಶೌಚಾಲಯ ಕಟ್ಟುವುದನ್ನು ತಡೆದಿದ್ದಾರೆ ಎಂದು ಛಾತರಪುರ ಜಿಲ್ಲೆಯ ಬಾರಾಖೇರ ಗ್ರಾಮದ ಪ್ರಜಾಪತಿ ಜಾತಿಯ (ಎಸ್ ಸಿ) ಕುಟುಂಬಗಳು ಆರೋಪಿಸಿವೆ. ಅಲ್ಲದೆ ತಮ್ಮ ಮನೆಯ ಮಹಿಳೆಯರು ಮನೆಯೊಳಗೇ ಶೌಚ ಮಾಡುವಂತೆ ಪಟೇಲ್ ಸಮುದಾಯ ಒತ್ತಡ ಹೇರಿವೆ ಎಂದೂ ಸಮುದಾಯ ಹೇಳಿದೆ. “ಮನೆಯೊಳಗೆ ಮಣ್ಣಿನ ಮಡಿಕೆಯಲ್ಲಿ ನಾವು ಶೌಚ ಮಾಡಬೇಕಿದೆ. ಅಲ್ಲದೆ ಮಹಿಳೆಯೊಬ್ಬಳು ಪಟೇಲರ ನಿಯಮ ಮೀರಿ ಮನೆಯ ಹೊರಗೆ ಶೌಚ ಮಾಡಿದ್ದಕ್ಕಾಗಿ ಆಕೆಯನ್ನು ಹೊಡೆದು ದೌರ್ಜನ್ಯ ಎಸಗಿದ್ದಾರೆ” ಎಂದು ಗ್ರಾಮದ ನಿವಾಸಿ ಚಂಪಾ ಪ್ರಜಾಪತಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಬಾರಾಖೇರ ಗ್ರಾಮದ ಪ್ರಜಾಪತಿ ಸಮುದಾಯ ಛಾತರಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೇಶ್ ಪ್ರಜಾಪತಿರನ್ನು ಭೇಟಿಯಾಗಿ ಲಿಖಿತ ದೂರು ಸಲ್ಲಿಸಿದ್ದಾರೆ. “ನಾವು ನಮ್ಮದೇ ನೆಲದಲ್ಲಿ ಮನೆಯ ಹೊರಗೆ ಶೌಚ ಕಟ್ಟಲು ಮುಂದಾಗಿದ್ದೇವೆಯೇ ವಿನಾ, ಬೇರೆಯವರ ನೆಲವನ್ನು ಅತಿಕ್ರಮಿಸಿಲ್ಲ. ಆದರೆ ಸ್ಥಳೀಯ ಕಂದಾಯ ಇಲಾಖೆ ಸಿಬ್ಬಂದಿಯ ನೆರವಿನಿಂದ ಪ್ರಭಾವಿ ಪಟೇಲ್ ಸಮುದಾಯದವರು ನಾವು ಮಾಡಿದ ಎಲ್ಲಾ ಶೌಚ ಗುಂಡಿಗಳನ್ನು ಮುಚ್ಚಿದ್ದಾರೆ” ಎಂದು ಗ್ರಾಮದ ನಿವಾಸಿ ಕಮಲೇಶ್ ಪ್ರಜಾಪತಿ ಹೇಳಿದ್ದಾರೆ.