ಅನಾಥಾಲಯದ ಬಾಲಕಿಯರನ್ನು ಲೈಂಗಿಕವಾಗಿ ಶೋಷಿಸಿದ ಪಾದ್ರಿ ಸೆರೆ

ಸಾಂದರ್ಭಿಕ ಚಿತ್ರ

ತಿರುವನಂತಪುರಂ : ಕೇರಳದ ಸಾಲೂರ್ ಎಂಬಲ್ಲಿರುವ ಲೈಟ್ ಹೌಸ್ ಕ್ರಿಶ್ಚಿಯನ್ ಚಿಲ್ಡ್ರನ್ಸ್ ಹೋಮ್ ಎಂಬ ಅನಾಥಾಲಯದ ಉಸ್ತುವಾರಿ ಹೊತ್ತಿರುವ ಪಾದ್ರಿ ಕೆ ವಿ ಪ್ರಸಾದ್ ಕುಮಾರ್ ಎಂಬಾತನನ್ನು ಅಲ್ಲಿನ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.

ಈ ಅನಾಥಾಲಯದಲ್ಲಿ 60ಕ್ಕೂ ಹೆಚ್ಚು ಬಡ ಕುಟುಂಬದ ಆದಿವಾಸಿ ಬಾಲಕಿಯರಿದ್ದು, ಅವರು ಮಾಮಿಡಿಪಳ್ಳಿ ಜಿಲ್ಲಾ ಪಂಚಾಯತ್ ಹೈಸ್ಕೂಲಿನಲ್ಲಿ ಆರರಿಂದ ಎಂಟನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ.

ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕಳೆದೊಂದು ತಿಂಗಳಿನಿಂದ ಶಾಲೆಗೆ ಗೈರಾಗಿದ್ದನ್ನು ಗಮನಿಸಿದ ಶಿಕ್ಷಕಿಯೊಬ್ಬರು ವಿಚಾರಿಸಿದಾಗ ಬಾಲಕಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂದು ತಿಳಿದುಬಂದಿತ್ತು. ಈ ಮಾಹಿತಿ ದೊರೆಯುತ್ತಿದ್ದಂತೆಯೇ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಶ್ರೀವಾಣಿ ಕೊಯ್ಯನ ಹಾಗೂ ವಿಧಾನಪರಿಷತ್ ಸದಸ್ಯೆ ಗುಮ್ಮಡಿ ಸಂಧ್ಯಾ ರಾಣಿ ಅನಾಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಬಾಲಕಿಯರ ಸಮಸ್ಯೆಯನ್ನು ಆಲಿಸಿದಾಗ ಪಾದ್ರಿ ಮತ್ತಾತನ ಪುತ್ರ ಅವರನ್ನು ಕಳೆದೆರಡು ವರ್ಷಗಳಿಂದ ಲೈಂಗಿಕವಾಗಿ ಶೋಷಿಸುತ್ತಿದ್ದರೆಂಬ ಅಂಶ ಬೆಳಕಿಗೆ ಬಂದಿತ್ತು.

ಕೂಡಲೇ ಪೊಲೀಸ್ ದೂರು ದಾಖಲಿಸಲಾಯಿತಲ್ಲದೆ ಬಾಲಕಿಯರನ್ನು ಆದಿವಾಸಿ ಕಲ್ಯಾಣ ಆಶ್ರಮ ಶಾಲೆಗೆ ಸೇರಿಸಲು ಸಂಬಂಧಿತ ಇಲಾಖೆಗೆ ಸೂಚಿಸಲಾಗಿದೆ.