ಲೋಕಸಭೆಯಲ್ಲಿ ಭಿನ್ನಚೇತನರ ಹಕ್ಕು ಕಾಯ್ದೆ ಅಂಗೀಕಾರ ಸಂಘಟನೆ ಹೋರಾಟಕ್ಕೆ ಸಂದ ಜಯ

ಜಿ ಎನ್ ನಾಗರಾಜ್

ಜಿ ಎನ್ ನಾಗರಾಜ್

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಭಿನ್ನಚೇತನರ ಹಕ್ಕುಗಳ ಕಾಯಿದೆ 2014ನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಿದ್ದು, ಇದಕ್ಕೆ ವಿರೋಧ ಪಕ್ಷಗಳು ಒಕ್ಕೊರಲ ಬೆಂಬಲ ನೀಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ರಾಜ್ಯ ಭಿನ್ನಚೇತನರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಜಿ ಎನ್ ನಾಗರಾಜ್ ಹೇಳಿದರು.

ಕುಂದಾಪುರದ ಕಾರ್ಮಿಕಭವನದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಆರನೇ ಸಮ್ಮೇಳನ್ನಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರಲ್ಲಿ ಅವರು ಮಾತನಾಡಿದರು.

ನೋಟುಗಳ ಅಮಾನ್ಯ ಹಿನ್ನೆಲೆಯಲ್ಲಿ ಇಡೀ ಸಂಸತ್ತಿನ ಕಲಾಪಗಳು ಸಂಘರ್ಷದಲ್ಲಿ ತೊಡಗಿ ವ್ಯರ್ಥವಾಗುವ ಸ್ಥಿತಿ ನಿರ್ಮಾಣಗೊಂಡಿದ್ದರೂ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಕ್ಕೊರಲಿನಿಂದ ಕಾಯ್ದೆ ಅಂಗೀಕಾರ ಮಾಡಿರುವುದು ಸಂಘಟನೆಯ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬಣ್ಣಿಸಿದರು.

ಶಿಕ್ಷಣ ಮತ್ತು ಉದ್ಯೋಗ ಖಾತರಿಗೊಳಿಸುವ, ಕನಿಷ್ಟ ಘನತೆಯಿಂದ ಜೀವಿಸುವ ಹಕ್ಕನ್ನು ನೀಡುವ ಈ ಕಾಯಿದೆ ಜಾರಿಗಾಗಿ ಕಳೆದ ಒಂಭತ್ತು ವರ್ಷಗಳಿಂದ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ ಎಂದ ಅವರು, ಹಲವು ಪ್ರತಿಭಟನೆಗಳನ್ನೂ ನಡೆಸಲಾಗಿತ್ತು ಎಂದರು.

ಈ ಹಿಂದೆ ಕೇಂದ್ರವು ಏಳು ಪ್ರಕಾರಗಳನ್ನು ಭಿನ್ನಚೇತನ ಕಾಯಿದೆಯಡಿಯಲ್ಲಿ ತಂದಿದ್ದು, ಹೊಸ ಕಾಯಿದೆಯಲ್ಲಿ ಅದನ್ನು 21 ಪ್ರಕಾರಗಳಿಗೆ ಎರಿಸಲಾಗಿರುವುದು ಶ್ಲಾಘನಿಯ ಎಂದ ಅವರು, ಮೀಸಲಾತಿಯನ್ನು ಮಾತ್ರ ಏರಿಸದೆ ಹಾಗೆಯೆ ಉಳಿಸಿಕೊಂಡಿರುವುದು ಸರಿಯಲ್ಲ. ಈ ಬಗ್ಗೆಯೂ ಹೋರಾಟ ನಡೆಸಲಾಗುತ್ತದೆ ಎಂದವರು ಹೆಳಿದರು.

ಅಲ್ಲದೇ ಕಾಯಿದೆ ಇನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಾಯುತ್ತಿದ್ದು, ಇನ್ನೆರಡು ವಾರಗಳಲ್ಲಿ ಅಂಗೀಕಾರ ದೊರಯಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ ಅವರು, ಕಾಯಿದೆಯನ್ನು ಜಾರಿಗೆ ತರುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಕ್ಷಣವೇ ನಿಯಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.