ವಿಮಾನಯಾನ ರದ್ದು : ಪ್ರಯಾಣಿಕರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಾಗಿದ್ದ ಮಂಗಳೂರು ಶಾರ್ಜಾ ನಡುವಿನ ಜೆಟ್ ಏರ್ವೇಸ್ ವಿಮಾನ ಯಾನವನ್ನು ಕೊನೆಗಳಿಗೆಯಲ್ಲಿ ರದ್ದುಪಡಿಸಲಾಗಿದೆ ಎಂದು ಹೇಳಿರುವ ಏರ್ ಲೈನ್ಸ್ ಸಂಸ್ಥೆಯ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 168 ಮಂದಿ ಪ್ರಯಾಣಿಕರು ವಿನಾಕಾರಣವಾಗಿ ವಿಮಾನ ನಿಲ್ದಾಣದಲ್ಲಿ ಕಾಯುವಂತಾಗಿತ್ತು.

“ಏರ್ ಲೈನ್ಸ್ ಅಧಿಕಾರಿಗಳು 8.30ಕ್ಕೆ ವಿಮಾನ ತಡವಾಗುತ್ತದೆ ಎಂದು ಹೇಳಿದ್ದರು. ವಿಮಾನ 9ಕ್ಕೆ ಹೊರಡಬೇಕಾಗಿತ್ತು. ಬಳಿಕ 9.30ಕ್ಕೆ ಮತ್ತೆ ಘೋಷಣೆ ಮಾಡಿದರು. ಬಳಿಕ 11.30ರವರೆಗೆ ವಿಮಾನ ಹೊರಡುವ ಬಗ್ಗೆ ತಿಳಿಸದೆ ಮಧ್ಯಾಹ್ನ 2.30ಕ್ಕೆ ವಿಮಾನ ರದ್ದಾಗಿದೆ ಎಂದು ತಿಳಿಸಿದರು” ಎಂದು ಪ್ರಯಾಣಿಕ ಸ್ಟೀವ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕನಿಷ್ಟ 11.15ರವರೆಗೆ ಇವರಿಗೆ ಏರ್ ಲೈನ್ಸ್ ಸಿಬ್ಬಂದಿ ಉಪಾಹಾರವನ್ನೂ ನೀಡಿರಲಿಲ್ಲ. ಮಕ್ಕಳು, ಹೆಂಗಸರು ವಿಮಾನ ನಿಲ್ದಾಣಕ್ಕೆ ಮುಂಜಾನೆ 6 ಗಂಟೆಗೆ ಬಂದು ಕಾಯುತ್ತಿದ್ದರು” ಎಂದೂ ಸ್ಟೀವ್ ತಮ್ಮ ನೋವು ವ್ಯಕ್ತಪಡಿಸಿದ್ದಾರೆ.

“ಭಟ್ಕಳದಿಂದ ನಾವು ಮುಂಜಾನೆ 3 ಗಂಟೆಗೆ ಹೊರಟು ವಿಮಾನ ನಿಲ್ದಾಣ ತಲುಪಿದ್ದೆವು. ಇಲ್ಲಿ ಪ್ರಯಾಣಿಕರಿಗೆ ಯಾವುದೇ ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಿರಲಿಲ್ಲ” ಎಂದು ಇನ್ನೊಬ್ಬ ಪ್ರಯಾಣಿಕ ದೂರಿದ್ದಾರೆ.