ಪ್ರಯಾಣಿಕನ ಗುದದ್ವಾರದಲ್ಲಿ ಅಡಗಿಸಿಟ್ಟ 4 ಚಿನ್ನದ ಬಿಸ್ಕಿಟ್

ಇದರ ಮೌಲ್ಲಯ ಮೌಲ್ಯ ಹತ್ತೂವರೆ ಲಕ್ಷ ರೂ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿದೇಶದಿಂದ ಆಗಮಿಸಿದ ಪ್ರಯಾಣಿಕನೊಬ್ಬನಿಂದ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‍ಐ) ಅಧಿಕಾರಿಗಳು 10.5 ಲಕ್ಷ ರೂ ಮೌಲ್ಯದ 349.8 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ ಕುತೂಹಲಕರ ಘಟನೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕಾಸರಗೋಡಿನ ಚಟ್ಟಂಚಾಲ್ ನಿವಾಸಿ ಅಬ್ದುಲ್ ರಝಾಕ್ (49) ತನ್ನ ಗುದನಾಳದಲ್ಲಿ ಚಿನ್ನವನ್ನಿಟ್ಟು ಅಕ್ರಮ ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

ದುಬೈಯಿಂದ ಸ್ಪೈಸ್ ಜೆಟ್ ವಿಮಾನ ನಿಲ್ದಾಣದ ಮೂಲಕ ಬುಧವಾರ ಸಂಜೆ 6.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ರಝಾಕನನ್ನು ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಆರೋಪಿಯ ಅನುಮಾನಾಸ್ಪದ ನಡೆಯನ್ನು ಕಂಡು ಸ್ಕ್ಯಾನಿಂಗಿಗೆ ಒಳಪಡಿಸಿದಾಗ ಈತನ ಗುದನಾಳದಲ್ಲಿ ಸಾಗಾಟ ಮಾಡಿದ್ದ 4 ಚಿನ್ನದ ಬಿಸ್ಕಿಟುಗಳು ಪತ್ತೆಯಾಗಿದೆ. ಚಿನ್ನವನ್ನು ಹೊರತೆಗೆದು ಪರೀಕ್ಷೆ ಮಾಡಿದಾಗ ಅದು 24 ಕ್ಯಾರೆಟ್ ಶುದ್ಧ ಚಿನ್ನ ಎಂದು ಗೊತ್ತಾಗಿದೆ.

ರಝಾಕ್ ನಿರಂತರವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕಿಂಗ್‍ಪಿಂಗ್ ಎಂದು ತಿಳಿದು ಬಂದಿದೆ. ಮಂಗಳೂರು, ಮುಂಬೈ, ಕೋಝಿಕ್ಕೋಡ್, ನವದೆಹಲಿ ಅಹ್ಮದಾಬಾದ್, ಚೆನ್ನೈ, ಕೊಚ್ಚಿ, ತಿರುವನಂತಪುರ, ಬೆಂಗಳೂರು, ಗೋವಾ ಮತ್ತು ಲಕ್ನೋ ವಿಮಾನ ನಿಲ್ದಾಣಗಳಲ್ಲಿ ಹಲವು ಬಾರಿ ಈತನ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಹಚ್ಚಲಾಗಿದೆ.

ಸೊತ್ತಿನ ಮೂಲಕ ಸಾಗಾಟ ಮಾಡಿದರೆ ಸಿಕ್ಕಿ ಬೀಳುವ ಭಯದಿಂದ ಅದನ್ನು ಗುದದ್ವಾರದೊಳಗೆ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದಾಗ ಸಿಕ್ಕಿ \ಬಿದ್ದಿದ್ದಾನೆ ಎಂದು ಡಿ ಆರ್ ಐ ಮಂಗಳೂರು ಪ್ರಾಂತದ ಉಪನಿರ್ದೇಶಕ ವಿನಾಯಕ ಭಟ್ ಹೇಳಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.