ಪಾದೆಬೆಟ್ಟು ಷಷ್ಠಿ ಉತ್ಸವದ ವೇಳೆ ಪಾರ್ಕಿಂಗ್ ಅವ್ಯವಸ್ಥೆ

ಅಟೋ ರಿಕ್ಷಾಗಳಿಂದ ದೇವಳದ ಸಂಪರ್ಕ ರಸ್ತೆ ಬ್ಲಾಕ್ ಆಗಿರುವುದು

ಅಸಾಮಾಧಾನ ವ್ಯಕ್ತ ಪಡಿಸಿದ ಭಕ್ತರು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ದೇವಳದ ಷಷ್ಠಿ ಉತ್ಸವದ ಹೆಸರಲ್ಲಿ ಗ್ರಾ ಪಂ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ನಿಷೆÉೀಧಿಸುವುದರಿಂದ ಸಾರ್ವಜನಿಕರು ಬಾರೀ ಸಮಸ್ಯೆಗೆ ಸಿಲುಕಿದ್ದಲ್ಲದೆ, ವಾಹನಗಳನ್ನು ಮುಂದೆ ಚಲಿಸದಂತೆ ತಡೆಯುತ್ತಿದ್ದ ಯುವಕರಲ್ಲಿ ಭಕ್ತರು ಮಾತಿನ ಚಕಮಕಿ ಕೂಡಾ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಪಾರ್ಕಿಂಗ್ ಅವ್ಯಸ್ಥೆಯ ಬಗ್ಗೆ ದೇವಳಕ್ಕೆ ಆಗಮಿಸಿದ್ದ ಭಕ್ತರೋರ್ವರು ಮಾತನಾಡಿ, “ಬಾಡಿಗೆ ನಡೆಸಿ ಹಣ ಗಳಿಸುವ ಆಟೋ ರಿಕ್ಷಾಗಳಿಗೆ ದೇವಳದ ಪಕ್ಕದಲ್ಲೇ ಅಟೋ ಪಾರ್ಕ್ ವ್ಯವಸ್ಥೆ ಮಾಡಿಕೊಟ್ಟಿರುವ ಸ್ಥಳೀಯ ಖಾಸಗಿ ಸಂಸ್ಥೆ ದೇವರ ದರ್ಶನಕ್ಕೆ ಹೋಗುವ ಭಕ್ತಾಧಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸದಿರುವುದು ವಿಷಾದನೀಯ. ಜಾತ್ರೆಯ ಹೆಸರಲ್ಲಿ ರಸ್ತೆ ಬ್ಲಾಕ್ ಆಗುತ್ತದೆ ಎಂಬ ನೆಪವೊಡ್ಡಿ ಗ್ರಾ ಪಂ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ನಿಷೇಧಿಸಿರುವುದು ಸರಿಯಲ್ಲ. ರಸ್ತೆ ಅಗಲ ಕಿರಿದಾಗಿರುವುದರಿಂದ ಬ್ಲಾಕ್ ಸರ್ವೇ ಸಾಮಾನ್ಯ…  ಖಾಸಗಿ ವಾಹನಗಳನ್ನು ತಡೆದು ಸಾರ್ವಜನಿಕರಿಗೆ ಸಮಸ್ಯೆಯೊಡ್ಡಿರುವುದು ಬೇಸರ ತಂದಿದೆ” ಎಂದರು.

ದೇವರ ಕಾರ್ಯಕ್ಕೆ ಎಂಬುದಾಗಿ ಬಹಳಷ್ಟು ಮಂದಿ ಕಷ್ಟ ಆದರೂ ವಾಹನವನ್ನು ಸ್ವಯಂ ಸೇವಕರು ಸೂಚಿಸಿದ ಜಾಗದಲ್ಲಿಟ್ಟು ದೇವಳಕ್ಕೆ ನಡೆದೇ ಸಾಗಿದ್ದರೂ ಅವರೂ ಕೂಡಾ ಮಾದ್ಯಮಗಳೊಂದಿಗೆ ತಮ್ಮ ನೋವನ್ನು ತೊಡಿಕೊಂಡಿದ್ದಾರೆ. “ವಾಹನ ಸಂಚಾರದಿಂದ ರಸ್ತೆ ಬ್ಲಾಕ್ ಆಗುವುದು ಹೌದಾಗಿದ್ದರೆ ಆಟೋಗಳು ಹಿಂಡು ಹಿಂಡಾಗಿ ಸಂಚರಿಸುವಾಗ ರಸ್ತೆ ಬ್ಲಾಕ್ ಆಗಿಲ್ಲವೇ.. ಸ್ವಯಂಸೇವಕರ ಸಹಿತ ಮುಂಡಾಸುಧಾರಿಗಳ ವಾಹನ ಸಂಚರಿಸುವಾಗ ರಸ್ತೆ ಬ್ಲಾಕ್ ಆಗುವುದಿಲ್ಲವೇ” ಎಂದು ಪ್ರಶ್ನಿಸಿದ ಅವರು, “ಇದೇ ರಸ್ತೆ ಮತ್ತೊಂದು ಗ್ರಾಮಕ್ಕೆ ಸಂಪರ್ಕ ರಸ್ತೆಯಾಗಿದ್ದು ಆ ಗ್ರಾಮಕ್ಕೆ ಹೋಗಲಿದೆ ಎಂದರೂ ಬಿಡದ ಸ್ವಯಂ ಸೇವಕರು ಸಾರ್ವಜನಿಕರ ಸಹನೆ ಪರೀಕ್ಷೆಗೆ ಮುಂದಾಗಿದ್ದು ಸರಿಯಾದ ಕ್ರಮವಲ್ಲ, ವಾಹನ ಸಂಚಾರ ನಿಷೇಧ ಮಾಡುವುದಿದ್ದರೆ ಎಲ್ಲವನ್ನೂ ನಿಷೇಧಿಸಲಿ.. ಅದುಬಿಟ್ಟು ಒಂದು ಕಣ್ಣಿಗೆ ಸುಣ್ಣ.. ಮತ್ತೊಂದು ಕಣ್ಣಿಗೆ ಬೆಣ್ಣೆ ನ್ಯಾಯ.. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅದೂ ಕೂಡಾ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಒಂದೇ ದೃಷ್ಠಿಯಲ್ಲಿ ಕಾಣುವಂತ್ತಾಗಲಿ” ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಈ ಪಾರ್ಕಿಂಗ್ ಸ್ವಯಂ ಸೇವಕ ಹಾಗೂ ವ್ಯವಸ್ಥೆಯ ರೂವಾರಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, “ಉತ್ತಮ ಉದ್ದೇಶವಿಟ್ಟು ಈ ವ್ಯವಸ್ಥೆ ಕಲ್ಪಿಸಲಾಗಿದೆ, ಇದರಿಂದ ಬಹಳಷ್ಟು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂಬ ಮಾಹಿತಿ ಇದೆ. ಮುಂದಿನ ದಿನದಲ್ಲಿ ಇಂಥ ಸಮಸ್ಯೆಯಾಗದಂತೆ ವ್ಯವಸ್ಥೆ ಕಲ್ಪಿಸುತ್ತೇವೆ” ಎಂದು ತಿಳಿಸಿದ್ದಾರೆ.