ಅಂಗಳದಲ್ಲಿ ನಿಲ್ಲಿಸಿದ್ದ ಆಟೋ, ಬೈಕಿಗೆ ಬೆಂಕಿ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಫರಂಗಿಪೇಟೆ ಸಮೀಪದ ಅರ್ಕುಳ-ಕೋಟೆಪುರ ಎಂಬಲ್ಲಿನ ನಿವಾಸಿ ರಹ್ಮತುಲ್ಲಾ ಎಂಬವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಅಟೋ ರಿಕ್ಷಾ ಹಾಗೂ ಬೈಕ್ ಶುಕ್ರವಾರ ತಡರಾತ್ರಿ ಹಠಾತ್ ಆಕಸ್ಮಿಕ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದೆ.

ರಹ್ಮತುಲ್ಲಾ ತನ್ನ ಆಟೋ ರಿಕ್ಷಾ ಹಾಗೂ ತಮ್ಮ ಸಹೋದರರಾದ ಹಾಶಿರ್ ಹಾಗೂ ಅನ್ಸಾರ್ ಅಲಿ ಅವರಿಗೆ ಸೇರಿದ ದ್ವಿಚಕ್ರ ವಾಹನಗಳನ್ನು ಎಂದಿನಂತೆ ಶುಕ್ರವಾರ ರಾತ್ರಿ ಕೂಡಾ ಮನೆಯಂಗಳದಲ್ಲಿ ನಿಲ್ಲಿಸಿ ಮಲಗಿದ್ದರು. ಮಧ್ಯರಾತ್ರಿ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಮನೆಯಂಗಳದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ರಹ್ಮತುಲ್ಲಾ ಅವರ ಗಮನಕ್ಕೆ ತಂದರಲ್ಲದೆ ಬೆಂಕಿ ನಂದಿಸಲು ಶ್ರಮಿಸಿದರು. ಆದರೆ ಅಷ್ಟೊತ್ತಿಗಾಗಲೇ ಅಟೋ ರಿಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಮೀಪದಲ್ಲೇ ಇದ್ದ ಬೈಕಿಗೂ ಬೆಂಕಿ ಆವರಿಸಿ ಅದೂ ಹಾನಿಗೊಂಡಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.