ಬೈದೆತಿ ಮೂರ್ತಿ ಶುದ್ದೀಕರಣಕ್ಕೆ ಮುಂದಾದ ಪರಿವಾರ ಸಂಘಟನೆ

ಅರಣ್ಯ ಅಧಿಕಾರಿಗಳಿಂದ ತಡೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಬಡಗನ್ನೂರು ಗರಾಮದ ಪಟ್ಟೆಯಲ್ಲಿರುವ ವೀರಪುರುಷ ಕೋಟಿಚೆನ್ನಯರ ತಾಯಿ ದೇಯಿ ಬೈದೆತಿ ಸ್ಮರಣಾರ್ಥ ನಿರ್ಮಿಸಲಾದ ಔಷಧಿ ವನದಲ್ಲಿರುವ ದೇವಿ ಮೂರ್ತಿಯ ಬಳಿ ಯುವಕನೊಬ್ಬ ಅಶ್ಲೀಲ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿದ್ದು, ಇದರಿಂದ ದೇವಿ ಮೂರ್ತಿ ಅಶುದ್ದವಾಗಿದೆ ಎಂದು ಪರಿವಾರ ಸಂಘಟನೆ ಕಾರ್ಯಕರ್ತರು ಮೂರ್ತಿ ಶುದ್ದೀಕರಣಕ್ಕೆ ತೆರಳಿದ್ದು, ಅದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಡೆದರು.

ಔಷಧಿ ವನದಲ್ಲಿರುವ ದೇಯಿ ಬೈದೆತಿ ಮೂರ್ತಿಯ ಎದೆಗೆ ಕೈ ಇಟ್ಟು ಈಶ್ವರಮಂಗಲದ ಹನೀಫ್ ಎಂಬ ರಿಕ್ಷಾ ಚಾಲಕ ಫೋಟೋ ತೆಗೆದು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದ. ವಿಷಯ ಗಂಭೀರತೆ ಪಡೆಯುತ್ತಿದ್ದಂತೆಯೇ ಬಿಲ್ಲವ ಸಂಘದವರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ದೂರು ನೀಡಿದ ಎರಡು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದ್ದು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸಿ ಪರಿವಾರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು ಮತ್ತು ಬಿಲ್ಲವ ಸಂಘ ಘಟನೆಯನ್ನು ಖಂಡಿಸಿ ಮೂರ್ತಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿತ್ತು.

ಮಂಗಳವಾರದಂದು ಪರಿವಾರ ಸಂಘಟನೆ ಹಾಗೂ ಮಹಿಳಾ ಸಂಘಟಟನೆ ಕಾರ್ಯಕರ್ತರು ಸ್ಥಳಕ್ಕೆ ಮೂರ್ತಿ ಶುದ್ದ ಮಾಡಲು ತೆರಳಿದ್ದರು. ಈ ಪ್ರಕ್ರಿಯೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತಡೆ ಒಡ್ಡಿದ್ದಾರೆ. ಔಷಧಿ ವನ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಅನುಮತಿ ಪಡೆಯದೆ ಪ್ರವೇಶ ಇಲ್ಲ ಎಂದು ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿತ್ತು. ಇದರಿಂದ ಸಂಘಟನೆಯ ಕಾರ್ಯಕರ್ತರು ಗೇಟಿನ ಹೊರಗಡೆ ನಿಂತು ಭಜನೆ ಹಾಗೂ ಅಭಿಷೇಕ ಮಾಡಿ ತೆರಳಿದ್ದಾರೆ. ಆದರೆ ಬೆಳಗ್ಗಿನ ವೇಳೆಯಲ್ಲಿ ಸಂಘಟನೆಯ ಕೆಲ ಮಂದಿ ಮೂರ್ತಿ ಬಳಿ ತೆರಳಿ ಅಭಿಷೇಕ ಮಾಡಿದ್ದಾರೆ ಎನ್ನಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.