ಗೋವಾಕ್ಕೆ ಗೋಮಾಂಸ ಆಮದಿಗೆ ಅಡ್ಡಿಪಡಿಸುವವರಿಗೆ ಶಿಕ್ಷೆ : ಪರಿಕ್ಕರ್

ಪಣಜಿ : ಕಾನೂನುಬದ್ಧ ಗೋಮಾಂಸ  ಆಮದಿಗೆ ಅಡ್ಡಿಯುಂಟು ಮಾಡುವ ಯಾರೇ ಆದರೂ ಅವರನ್ನು ಶಿಕ್ಷಿಸಲಾಗುವುದು ಎಂದು ಹೇಳುವ ಮೂಲಕ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸ್ವಘೋಷಿತ ಗೋರಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಗೋರಕ್ಷಕರಿಂದ ಕಿರುಕುಳ ಆರೋಪಿಸಿ ಮುಷ್ಕರ ಹೂಡಿದ್ದ ಮಾಂಸ ವರ್ತಕರು ತಮ್ಮ ಮುಷ್ಕರ ವಾಪಸ್ ಪಡೆದ ನಂತರ ಪರಿಕ್ಕರ್ ಅವರಿಂದ ಮೇಲಿನ ಹೇಳಿಕೆ ಬಂದಿದೆ.

ಕರ್ನಾಟಕದ ಗಡಿ ಭಾಗ ಬೆಳಗಾವಿಯಿಂದ ಗೋಮಾಂಸ ತರಿಸುವ ವರ್ತಕರಿಗೆ ಕಿರುಕುಳವುಂಟಾಗದಂತೆ ನೋಡಿಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ವರ್ತಕರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಅಂತ್ಯಗೊಳಿಸಿದ್ದರು. ಈ ಮುಷ್ಕರದಿಂದಾಗಿ ಗೋವಾದಲ್ಲಿ ಗೋಮಾಂಸ ಕೊರತೆಯೂ ಎದುರಾಗಿತ್ತು.

ಕರ್ನಾಟಕ-ಗೋವಾ ಗಡಿಯುದ್ದಕ್ಕೂ  ಗೋವುಗಳನ್ನು ಅಕ್ರಮ ಕಸಾಯಿಖಾನೆಗಳಲ್ಲಿ ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ  ಕರ್ನಾಟಕದಿಂದ ಗೋಮಾಂಸ ಹೊತ್ತು ಸಾಗುತ್ತಿದ್ದ ಟ್ರಕ್ಕುಗಳ ಮೇಲೆ  ಗೋರಕ್ಷಾ ಅಭಿಯಾನದ ಕಾರ್ಯಕರ್ತರು ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮುಷ್ಕರ ಆರಂಭಗೊಂಡಿತ್ತು.

 

LEAVE A REPLY