ಬೆಂಗಳೂರಿನ ಬಿಷಪ್ ಅತ್ಯಾಚಾರ ಆರೋಪಿ

ಬೆಂಗಳೂರು : ಬಾಲ್ಡ್ವಿನ್ ಸಮೂಹದ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬಿಷಪ್ ಅವರು ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿರುವುದರಿಂದ ಅವರನ್ನು ಸಂಸ್ಥೆಯಿಂದ ಹೊರಗಿಡಬೇಕೆಂದು ಕೋರಿ ಶಾಲೆಯ ಸುಮಾರು 27 ಮಂದಿ ಮಕ್ಕಳ ಹೆತ್ತವರ ಗುಂಪೊಂದು ಕರ್ನಾಟಕ ರಾಜ್ಯ  ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೊರೆ ಹೋಗಿದೆ.

“ಅತ್ಯಾಚಾರ ಆರೋಪಿಯಾಗಿರುವ ಬಿಷಪ್ ಎನ್ ಎಲ್ ಕರ್ಕರೆ  ಅವರನ್ನು ಅಧ್ಯಕ್ಷರಾಗಿ ನೇಮಿಸಿರುವುದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016 ಇದರಲ್ಲಿ  ನಮೂದಿಸಲಾಗಿರುವ ನೇಮಕಾತಿ ಸಂಬಂಧಿ  ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಶಿಕ್ಷಕ-ಶಿಕ್ಷಕೇತರ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಅಭ್ಯರ್ಥಿಗಳ ಹಿನ್ನೆಲೆ ಪರೀಕ್ಷೆ ಅತೀ ಅಗತ್ಯ. ಬಾಕಿ ಕ್ರಿಮಿನಲ್ ಪ್ರಕರಣಗಳಿದ್ದವರನ್ನು ನೇಮಕಾತಿ ಮಾಡಬಾರದು ಎಂದು ನಿಯಮ ತಿಳಿಸುತ್ತದೆ” ಎಂದು ಆಯೋಗದ ಅಧ್ಯಕ್ಷೆ  ಕೃಪಾ ಆಳ್ವ ಅವರಿಗೆ ಸಲ್ಲಿಸಲಾಗಿರುವ ದೂರು ತಿಳಿಸುತ್ತದೆ.

“ಶಾಲೆಯ ಮಕ್ಕಳಿಗೆ ಬಿಷಪ್ ಬಗ್ಗೆ ಭಯವಿದೆ. ಅವರು ಅತ್ಯಾಚಾರ ಆರೋಪಿ ಎಂಬುದನ್ನು ವರದಿಗಳಲ್ಲಿ  ಹಾಗೂ ಅಂತರಜಾಲದಲ್ಲಿ ಓದಿ ತಿಳಿದಿರುವ ಅವರು ಶಾಲೆಗೆ ಹೋಗಲು ಭಯಪಡುತ್ತಿದ್ದಾರೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳದೇ ಇದ್ದರೆ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಬಹುದು” ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ಬಿಷಪ್ ವಿರುದ್ಧ ಮಹಾರಾಷ್ಟ್ರ ನ್ಯಾಯಾಲಯವೊಂದರಲ್ಲಿ ಅತ್ಯಾಚಾರ ಪ್ರಕರಣವೊಂದು ವಿಚಾರಣೆಗೆ ಬಾಕಿಯಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದ್ದು, 2015ರ  ಪತ್ರಿಕೆಯೊಂದರಲ್ಲಿ ಬಂದ ವರದಿಯ ತುಣುಕೊಂದನ್ನೂ ಲಗತ್ತಿಸಲಾಗಿದೆ. ಅದರಲ್ಲಿ ಹೀಗೆಂದು ಬರೆಯಲಾಗಿದೆ. “ಮಹಾರಾಷ್ಟ್ರ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಪ್ರಕರಣವನ್ನು ಬಿಷಪ್ ಕರ್ಕರೆ ವಿರುದ್ಧ ದಾಖಲಿಸಿದ್ದಾರೆ.” “ಶಾಲೆಯೊಂದರಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಆಶ್ವಾಸನೆ ನೀಡಿ ಸುಮಾರು ಎರಡು ವರ್ಷಗಳ ಕಾಲ ಆತ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು 42 ವರ್ಷದ ಮಹಿಳೆಯೊಬ್ಬರು ದೂರಿದ್ದರು” ಎಂದೂ ವರದಿ ತಿಳಿಸುತ್ತದೆ.

ಆದರೆ ಬಾಲ್ಡ್ವಿನ್ ಮೆಥಾಡಿಸ್ಟ್ ಕಾಲೇಜಿನ  ಮ್ಯಾನೇಜರ್ ಆಗಿರುವ ರೆವರೆಂಡ್ ಡೇವಿಡ್ ನಥಾನಿಯಲ್ ಆರೋಪಗಳನ್ನು ನಿರಾಕರಿಸಿದ್ದು ಅವುಗಳು ಸುಳ್ಳು ಎಂದು ಹೇಳಿದ್ದಾರೆ. “ಕರ್ಕರೆ ಅವರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಲ್ಲ ಎಂದು ಪೊಲೀಸ್ ಇಲಾಖೆ  ಹೇಳಿದೆ. ಜನರು ಬಿಷಪ್ ಅವರನ್ನು ವಿನಾ ಕಾರಣ ತೊಂದರೆಗೀಡು ಮಾಡುತ್ತಿದ್ದಾರೆ. ಅವರೊಬ್ಬ ಉತ್ತಮ ಆಡಳಿತಗಾರ” ಎಂದು ಅವರು ಹೇಳಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ಅಧ್ಯಕ್ಷೆ ಕೃಪಾ ಆಳ್ವ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.