ಚುಚ್ಚುಮದ್ದು ಅಭಿಯಾನ ಘೋಷಣೆ : ಪೋಷಕರು, ಶಾಲೆಗಳಲ್ಲಿ ಗೊಂದಲ

ಬೆಂಗಳೂರು : ರಾಜ್ಯದ ಇತಿಹಾಸದಲ್ಲೇ ಅಭೂತಪೂರ್ವ ಎನ್ನಬಹುದಾದ ಬೃಹತ್ ಚುಚ್ಚುಮದ್ದು ಅಭಿಯಾನವನ್ನು ಆರಂಭಿಸಲು ಇನ್ನು ನಾಲ್ಕು ವಾರಗಳು ಉಳಿದಿರುವಂತೆಯೇ  ರಾಜ್ಯದ ಶಾಲೆಗಳಲ್ಲಿ ಮತ್ತು ಪೋಷಕರಲ್ಲಿ ಗೊಂದಲ ಹೆಚ್ಚಾಗಿದೆ.

ಕೇಂದ್ರದ ಎಂ ಆರ್ ಚುಚ್ಚುಮದ್ದು ಪ್ರಚಾರಾಂದೋಲನವನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಜ್ಜಾಗಿರುವ ರಾಜ್ಯದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ರಾಜ್ಯದಲ್ಲಿ ವ್ಯಾಪಕವಾಗಿರುವ ಸಿಡುಬು ಮತ್ತು ರುಬೆಲ್ಲಾ ಸೋಂಕು ಖಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ನಿರ್ಧರಿಸಿದೆ. ಮುಂದಿನ ಫೆಬ್ರವರಿ 7ರಿಂದ 28ರವರೆಗೆ ಈ ಲಸಿಕೆ ಚುಚ್ಚುಮದ್ದು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಗೋವಾ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಲಕ್ಷದ್ವೀಪದಿಂದ 2020ರ ಒಳಗೆ ಈ ಮಾರಕ ರೋಗವನ್ನು ಹೊಡೆದೋಡಿಸಲು ಶ್ರಮಿಸಲಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಯಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವ ವೈದ್ಯರೊಬ್ಬರ ಅಭಿಪ್ರಾಯದಲ್ಲಿ ಈ ಅಭಿಯಾನದ ಅವಧಿಯಲ್ಲಿ ಒಂಬತ್ತು ತಿಂಗಳಿಂದ 15 ವರ್ಷದ ಒಳಗಿನ ಒಟ್ಟು 1 ಕೋಟಿ 64 ಲಕ್ಷ ಮಕ್ಕಳಿಗೆ ಚುಚ್ಚುಮದ್ದು ನೀಡಲು ಯೋಚಿಸಲಾಗಿದೆ. ಐದು ವರ್ಷಗಳ ಮೇಲ್ಪಟ್ಟ ಮಕ್ಕಳಿಗೆ ಶಾಲೆಗಳಲ್ಲಿ ಮತ್ತು ಶಾಲೆಗೆ ಹೋಗದ ಮಕ್ಕಳಿಗೆ ಅಂಗನವಾಡಿಗಳಲ್ಲಿ ಮತ್ತು ಮನೆಗಳಲ್ಲೇ ಚುಚ್ಚು ಮದ್ದು ನೀಡಲಾಗುತ್ತದೆ.

ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಮಧ್ಯಮ ಶಾಲೆಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಹೇಳುತ್ತಾರೆ. ಈ ಸಂಬಂಧ ಇಲ್ಲ ಪೋಷಕರೂ ಅಭಿಯಾನಕ್ಕೆ ಪ್ರೋತ್ಸಾಹ ನೀಡುವಂತೆ ಕೋರಿದ್ದಾರೆ. ಆದರೆ ಈ ಅಭಿಯಾನದಿಂದ ತಮ್ಮ ಮಕ್ಕಳಿಗೆ ಹಾನಿ ಉಂಟಾಗಬಹುದು ಎಂದು ಹಲವಾರು ಖಾಸಗಿ ಶಾಲಾ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಮಕ್ಕಳಿಗೆ ಈಗಾಗಲೇ ಎರಡು ಬಾರಿ ಚುಚ್ಚು ಮದ್ದು ನೀಡಲಾಗಿದ್ದು ಮೂರನೆಯ ಲಸಿಕೆ ಅಗತ್ಯವಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ.  ಮೂರನೆಯ ಚುಚ್ಚುಮದ್ದು ಮಕ್ಕಳ ಆರೋಗ್ಯಕ್ಕೆ ಹಾನಿ ಉಂಟುಮಾಡುವುದಿಲ್ಲ ಎನ್ನಲು ಯಾವುದೇ ಪುರಾವೆಗಳಿಲ್ಲ ಎಂದು ಸಾರ್ವಜನಿಕ ವಲಯಗಳಲ್ಲಿ ಹೇಳಲಾಗುತ್ತಿದೆ.

ಈ ಕುರಿತು ಕೆಲವು ಸಂಘಟನೆಗಳು ಆನ್‍ಲೈನ್ ಅರ್ಜಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಅಭಿಯಾನ ಹಮ್ಮಿಕೊಳ್ಳುವ ಮುನ್ನ ಪೋಷಕರ ಅಭಿಪ್ರಾಯ ಏಕೆ ಸಂಗ್ರಹಿಸಿಲ್ಲ ಎಂದು ಪ್ರಶ್ನಿಸಲಾಗಿದೆ. ಮತ್ತೊಂದೆಡೆ ಸರ್ಕಾರದ ಆದೇಶ ಎಲ್ಲ ಶಾಲೆಗಳಿಗೂ ತಲುಪಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿದೆ.  ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮುನ್ನ ಪೋಷಕರ ಸಮ್ಮತಿ ಪಡೆಯುವುದು ತಮ್ಮ ಕರ್ತವ್ಯ ಎಂದು ಖಾಸಗಿ ಶಾಲೆಗಳ ಮುಖ್ಯಸ್ಥರು ಹೇಳುತ್ತಿದ್ದಾರೆ.

ಈ ಅಭಿಯಾನವನ್ನು ಕುರಿತಂತೆ ಪೋಷಕರ ಸಮ್ಮತಿ ಪಡೆಯುವಲ್ಲಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸರ್ಕಾರದ ಇಲಾಖೆಗಳು ವಿಫಲವಾಗಿವೆ ಎಂಬ ಆರೋಪಗಳೂ ಇವೆ. ಸರ್ಕಾರ ಈ ಅಭಿಯಾನವನ್ನು ನಡೆಸುವ ಉದ್ದೇಶವೇನು ಎಂದು ಸ್ಪಷ್ಟಪಡಿಸಿದಲ್ಲಿ ಮಾತ್ರ ಪೋಷಕರು ತಮ್ಮಮಕ್ಕಳಿಗೆ ಚುಚ್ಚುಮದ್ದು ಕೊಡಲು ಸಮ್ಮತಿಸಬಹುದು ಎಂದು ಶಾಲಾ ಮುಖ್ಯಸ್ಥರು ಹೇಳುತ್ತಿದ್ದಾರೆ.