ರಕ್ಷಾಬಂಧನ ಕತ್ತರಿಸಿದ ಆಂಗ್ಲ ಮಾಧ್ಯಮ ಶಾಲೆ ವಿರುದ್ಧ ಪೋಷಕರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ರಕ್ಷಾ ಬಂಧನ ಕಟ್ಟಿಕೊಂಡು ಶಾಲೆಗೆ ಬಂದಿದ್ದ ಮಕ್ಕಳಿಗೆ ಅದನ್ನು ಕಿತ್ತೊಗೆಯುವಂತೆ ಶಾಲೆಯ ಆಡಳಿತ ಮಂಡಳಿ ಸೂಚಿಸಿದ್ದು, ಅದರಂತೆ ಶಾಲೆಯ ಹಿರಿಯ ವಿದ್ಯಾರ್ಥಿಗಳೇ ಕಿರಿಯರ ರಕ್ಷಾ ಬಂಧನವನ್ನು ಕತ್ತರಿಯಿಂದ ಕತ್ತರಿಸಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಅಡ್ಡಿಯಾಗಿದೆ ಎಂದು ಪೋಷಕರು ಶಾಲಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ತಾಲೂಕಿನ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯು ವಿವಾದದ ಕೇಂದ್ರವಾಗಿದ್ದು, ಶಾಲಾ ಮಕ್ಕಳ ರಕ್ಷಾ ಬಂಧನವನ್ನು ತೆಗೆಯುವಂತೆ ಶಾಲೆಯ ಶಿಕ್ಷಕರು ಸೂಚಿಸಿರುವುದು ರಾದ್ಧಾಂತಕ್ಕೆ ಕಾರಣವಾಗಿದೆ.

ಕಳೆದ ಸೋಮವಾರದಂದು ರಕ್ಷಾ ಬಂಧನ ದಿನವಾಗಿದ್ದು, ಇದಾದ ಎರಡೇ ದಿನಗಳಲ್ಲಿ ರಾಖಿ ತೆಗೆಯುವಂತೆ ಶಿಕ್ಷಕ ವರ್ಗ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಹಿರಿಯ ವಿದ್ಯಾರ್ಥಿಗಳು ಕಿರಿಯರ ರಾಖಿಯನ್ನು ಕತ್ತರಿಸಿ ಎಸೆದಿದ್ದಾರೆ. ಅಣ್ಣತಂಗಿಯರ ಭಾೃತತ್ವದ ದ್ಯೋತಕವಾದ ರಕ್ಷಾಬಂಧನದ ರಕ್ಷೆದಾರವನ್ನು ಬಲವಂತವಾಗಿ ಕತ್ತರಿಸುವುದು ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿ ಕೆಲ ಪೋಷಕರು ಪರಿವಾರ ಸಂಘಟನೆಗಳ ಮುಖಂಡರೊಂದಿಗೆ ಶುಕ್ರವಾರ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಇಂತಹ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ರಕ್ಷಾಬಂಧನ ದಾರವನ್ನು ತೆಗೆಯುವಂತೆ ಆಡಳಿತ ಮಂಡಳಿ ಅಥವಾ ಶಿಕ್ಷಕರು ಬಲವಂತ ಮಾಡಿಲ್ಲ. ಆದರೆ ಫ್ಯಾನ್ಸಿ ರಕ್ಷಾ ದಾರಗಳು ಹಾಗೂ ಫ್ರೆಂಡ್ ಶಿಪ್ ಬ್ಯಾಂಡುಗಳನ್ನು ತೆಗೆಯುವಂತೆ ಸೂಚಿಸಲಾಗಿತ್ತೇ ಹೊರತು ಸಾಂಪ್ರದಾಯಿಕ ದಾರಗಳನ್ನು ತೆಗೆಯುವಂತೆ ಯಾವುದೇ ಬಲವಂತ ಮಾಡಿಲ್ಲ. ಅಲ್ಲದೇ ತಾವೇ ಶಾಲೆಯಲ್ಲಿ ರಕ್ಷಾಬಂಧನ ಆಚರಿಸಿಕೊಂಡಿದ್ದು, ನಮ್ಮಲ್ಲಿ ಎಲ್ಲರೂ ಸಹೋದರ ಸಹೋದರಿಯರೇ” ಎಂದು ಶಾಲಾ ಮುಖ್ಯಸ್ಥ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ವಿಹಿಂಪ ಮುಖಂಡ ರತ್ನಾಕರ ಅಮೀನ್ ಮಾತನಾಡಿ, “ಶಿಕ್ಷಣ ಪದ್ದತಿಯಲ್ಲಿ ಏನೇ ನಿಂiÀiಮಾವಳಿಗಳಿದ್ದರೂ ಧಾರ್ಮಿಕ ಆಚರಣೆಯ ವಿಚಾರಗಳು ಬಂದಾಗ ಆಡಳಿತ ಮಂಡಳಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕಿದೆ ಹಾಗೂ ಇಂತಹ ಗೊಂದಲಗಳು ಮುಂದೆ ಉದ್ಭವಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು” ಎಂದರು.

ಆದರೆ ಶಾಲೆಯ ಆಡಳಿತ ಮಂಡಳಿಯ ಸೂಚನೆಯಿಲ್ಲದೇ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ರಕ್ಷಾ ಬಂಧನ ದಾರವನ್ನು ಕತ್ತರಿಸುವುದಕ್ಕೆ ಸಾಧ್ಯವಿಲ್ಲ, ವಿದ್ಯಾರ್ಥಿಗಳ ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮುಂದೆ ಹೀಗಾಗದಂತೆ ಭರವಸೆ ನೀಡಿದ ಬಳಿಕ ಈ ವಿವಾದ ಇತ್ಯರ್ಥವಾಗಿದೆ.