ಚಲಿಸುತ್ತಿದ್ದ ರೈಲಿನ ಪ್ಯಾಂಟ್ರಿ ಕಾರೊಳಗೆ ಮಹಿಳೆ ಅತ್ಯಾಚಾರಗೈದ ಸಿಬ್ಬಂದಿ ಸೆರೆ

ಸೂರತ್ : ಜೂನ್ 10ರಂದು ರಾತ್ರಿ ಮುಂಬೈ-ಸೂರತ್ ಮಧ್ಯೆ ಸಂಚರಿಸುತ್ತಿದ್ದ ರೈಲೊಂದರಲ್ಲಿ 32 ವರ್ಷದ ಮಹಿಳೆಯೊಬ್ಬರ ಅತ್ಯಾಚಾರಗೈದ 32 ವರ್ಷದ ರೈಲ್ವೇ ಪ್ಯಾಂಟ್ರಿ ಸಿಬ್ಬಂದಿಯೊಬ್ಬನನ್ನು ವಡೋದರದಲ್ಲಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ದಿಲ್ಲಿ ಮೂಲದ ಕಂಪೆನಿಯ ಉದ್ಯೋಗಿ ಜಾನ್ಸಿಯ ನಿವಾಸಿ ಅಜರ್ ಖಾನ್ ಅರಾವಳಿ ಎಕ್ಸ್‍ಪ್ರೆಸ್ಸಿನಲ್ಲಿ ಪ್ಯಾಂಟ್ರಿ (ರೈಲಿನ ಅಡುಗೆ ಉಗ್ರಾಣ) ಗುತ್ತಿಗೆ ಪಡೆದಿದ್ದ. ಬಂಧಿತ ಈತನನ್ನು ಈಗ ಸೂರತಿಗೆ ಕರೆತರಲಾಗಿದೆ. ದೂರುದಾರೆ ನೀಡಿದ ಮಾಹಿತಿಯನ್ವಯ ಆರೋಪಿ ಖಾನ್ ಬಂಧಿಸಲ್ಪಟ್ಟಿದ್ದಾನೆ. ಅತ್ಯಾಚಾರಕ್ಕೊಳಗಾದ ವಿವಾಹಿತ ಮಹಿಳೆ ಗಾಜಿಯಾಬಾದಿನ ನಿವಾಸಿಯಾಗಿದ್ದಾಳೆ. ಜೈಪುರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಕರು ತುಂಬಿದ್ದರೂ, ಈಕೆಗೆ ಸೀಟು ತೆಗೆದುಕೊಡುವುದಾಗಿ ಖಾನ್ ಭರವಸೆ ನೀಡಿ ರೈಲಿಗೆ ಹತ್ತಿಸಿಕೊಂಡಿದ್ದ. ನಂತರ ಆಕೆಯ ಮೇಲೆ ರೈಲಿನ ಪ್ಯಾಂಟ್ರಿ ಕಾರಿನೊಳಗೆಯೇ ಅತ್ಯಾಚಾರಗೈದಿದ್ದ.