ಬಿ ಆರ್ ಶೆಟ್ಟಿ ಆಸ್ಪತ್ರೆ ಸಮಾರಂಭದಿಂದ ದೂರ ಉಳಿಯುವಂತೆ ರಾಷ್ಟ್ರಪತಿಗೆ ಪತ್ರ

ಉಡುಪಿ : ಎನ್ನಾರೈ ಉದ್ಯಮಿ ಬಿ ಆರ್ ಶೆಟ್ಟಿ ಅವರು ನಿರ್ಮಿಸಲಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಇಂದು ನಡೆಯಲಿರುವ  ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸದಂತೆ ಹಾಜಿ ಅಬ್ದುಲ್ಲಾ ಮೆಟರ್ನಿಟಿ ಎಂಡ್ ಚಿಲ್ಡ್ರನ್ ಹಾಸ್ಪಿಟಲ್ ಪ್ರಿವೆನ್ಶನ್ ಕಮಿಟಿಯ ಸದಸ್ಯರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ವಿನಂತಿಸಿದ್ದಾರೆ.

ಮಹಿಳೆಯರ ಮತ್ತು ವiಕ್ಕಳ ಆಸ್ಪತ್ರೆಯನ್ನು  ಶೆಟ್ಟಿಗೆ ಹಸ್ತಾಂತರಿಸಲು ರಾಜ್ಯ ಸರಕಾರ ಕೈಗೊಂಡಿರುವ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿರುವುದರಿಂದ ರಾಷ್ಟ್ರಪತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸರಿಯಾಗದು ಎಂದು ಶನಿವಾರ ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಸದಸ್ಯರು ಹೇಳಿದ್ದಾರೆ.

“ಈ ವಿಚಾರವನ್ನು ಪತ್ರವೊಂದರ ಮುಖಾಂತರ ರಾಷ್ಟ್ರಪತಿಗೆ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯ ಸರಕಾರ ಹಾಗೂ ಬಿ ಆರ್ ಶೆಟ್ಟಿ ನಡುವೆ ಸಹಿ ಹಾಕಲಾದ ಒಪ್ಪಂದಕ್ಕಿರುವ ವಿರೋಧದ ಬಗ್ಗೆಯೂ ಅವರಿಗೆ ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. ರಾಷ್ಟ್ರಪತಿಗಳ ಉಡುಪಿ ಭೇಟಿಗೆ ನಮ್ಮ ವಿರೋಧವಿಲ್ಲ, ಅವರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನಮಗೆ ಅಸಮಾಧಾನ ತಂದಿದೆ” ಎಂದು ಸಮಿತಿ ಸದಸ್ಯ ಯೊಗೀಶ್ ಶೆಟ್ಟಿ ಹೇಳಿದ್ದಾರೆ.ನಮ್ಮ ಪತ್ರದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ  ಅಧಿಕಾರಿಗಳು ಹಾಜಿ ಅಬ್ದುಲ್ಲಾ ಕುಟುಂಬವನ್ನು ಕಂಡು ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

“ಪವಿತ್ರ ಸ್ಥಳವಾಗಿರುವ ರಾಜಾಂಗಣದಲ್ಲಿ ಶಿಲಾನ್ಯಾಸ ಸಮಾರಂಭಕ್ಕೆ ಅನುಮತಿಸದಂತೆ ನಾವೀಗಾಗಲೇ ಪೇಜಾವರ ಮಠಾಧೀಶರಿಗೆ ಪತ್ರ ಬರೆದಿದ್ದೇವೆ” ಎಂದು ಹೇಳಿದ ಸಮಿತಿಯ ಇನ್ನೊಬ್ಬ ಸದಸ್ಯ  ಜಿ ರಾಜಶೇಖರ್, “ಬಿ ಆರ್ ಶೆಟ್ಟಿ ಅವರಿಗೆ ಸಮಾಜ ಸೇವೆ ಸಲ್ಲಿಸಲು ನಿಜವಾದ ಕಳಕಳಿ ಇದ್ದರೆ ಅವರು ಜಾಗ ಖರೀದಿಸಿ ಆಸ್ಪತ್ರೆ ನಿರ್ಮಿಸಲಿ” ಎಂದಿದ್ದಾರೆ.