ಕೋಳಿ ತ್ಯಾಜ್ಯ ಡಂಪಿಂಗ್ ತಡೆ ಕ್ರಮಕ್ಕೆ ಸಮಿತಿ ರಚನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜಿಲ್ಲೆಯಾದ್ಯಂತ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ಡಂಪಿಂಗ್ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಕಳವಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ತಿಂಗಳೊಳಗೆ ಈ ಸಮಸ್ಯೆಯ ಬಗ್ಗೆ ಸಮಗ್ರ ವರದಿ ಸಲ್ಲಿಸಿ, ಸಮಸ್ಯೆಗೆ ತಿಂಗಳೊಳಗೆ ಪರಿಹಾರ ಕಂಡುಕೊಳ್ಳಲು ಸಲಹೆ ಮತ್ತು ಪರಿಹಾರಗಳನ್ನು ಸೂಚಿಸುವುದಕ್ಕಾಗಿ ಸಮಿತಿ ಯೊಂದನ್ನು ರಚಿಸಿದೆ.

ಕೋಳಿ ಫಾಮ್ರ್ಸ್ ಮತ್ತು ಅಂಗಡಿಗಳು ರಸ್ತೆಬದಿಯಲ್ಲಿ ಮತ್ತು ಇತರ ಮುಕ್ತ ಪ್ರದೇಶಗಳಲ್ಲಿ ಕೋಳಿ ತ್ಯಾಜ್ಯ ಎಸೆಯುತ್ತಿರುವ ಸಮಸ್ಯೆಯ ಬಗ್ಗೆ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಚರ್ಚಿಸಲ್ಪಟ್ಟ ಬಳಿಕ ಪಂಚಾಯತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ಆರ್ ರವಿಯವರು ಜಿಲ್ಲಾ ಕಣ್ಗಾವಲು ಅಧಿಕಾರಿ ಮುಂದಾಳತ್ವದಲ್ಲಿ ಸಮಿತಿ ರಚಿಸುವುದಾಗಿ ಘೋಷಿಸಿದ್ದಾರೆ.

ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಲಿದ್ದಾರೆ.

ಸಮಿತಿಯು ಜಿಲ್ಲೆಯ ಹಂದಿ ಘಟಕಗಳ ಸ್ಥಿತಿಗತಿಗಳನ್ನೂ ಅಧ್ಯಯನ ನಡೆಸಲಿದೆ. ವರದಿಯು ಪರವಾನಗಿ ಹೊಂದಿದ ಕೋಳಿ ಫಾರ್ಮುಗಳು, ಅಂಗಡಿಗಳು, ಹಂದಿ ಘಟಕಗಳು ಮತ್ತು ಅನಧಿಕೃತ ಅಂಗಡಿಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದೇ ವೇಳೆ ಈ ಕೋಳಿ ಮತ್ತು ಹಂದಿ ಘಟಕಗಳು ನೈರ್ಮಲ್ಯ ವಿಧಾನಗಳನ್ನು, ಕಾನೂನು ಅವಶ್ಯಕತೆಗಳನ್ನು ಮತ್ತು ಸುರಕ್ಷಿತ ತ್ಯಾಜ್ಯ ವಿಲೇವಾರಿಗೆ ಸೂಚಿಸಲಾಗಿರುವ ಸಲಹೆಗಳನ್ನು ಪಾಲಿಸುತ್ತಿವೆಯಾ ಎಂಬುದನ್ನು ಕೂಡ ಅಧ್ಯಯನ ವರದಿ ಒಳಗೊಂಡಿರುತ್ತದೆ.

ಕೋಳಿ ಫಾರ್ಮ್ ಇರುವ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮನೆಗಳು ಇರಬಾರದು ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.