ಶಾಸಕ ಸೊರಕೆ ಎದುರೇ ಅಸಮಾಧಾನ ವ್ಯಕ್ತಪಡಿಸಿದ ಪಂಚಾಯತ್ ಸದಸ್ಯೆ

ಶಾಸಕರಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸದಸ್ಯೆ ಶಕುಂತಳ

ಕಿಂಡಿ ಅಣೆಕಟ್ಟು ವಿವಾದ

ನಮ್ಮ, ಪ್ರತಿನಿಧಿ ವರದಿ

ಪಡುಬಿದ್ರಿ : ಕಿಂಡಿ ಅಣೆಕಟ್ಟು ಗುದ್ದಲಿ ಪೂಜೆಗೆ ಆಗಮಿಸಿದ ಕಾಪು ಕ್ಷೇತ್ರ ಶಾಸಕರ ಎದುರಲ್ಲಿಯೇ ಕಾಮಗಾರಿಗೆ ನಿಗದಿ ಪಡಿಸಿದ ಸ್ಥಳದ ಬಗ್ಗೆ ಸ್ಥಳೀಯ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯೆ ಶಕುಂತಳ ಪೂಜಾರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಶಾಸಕ ವಿನಯಕುಮಾರ್ ಸೊರಕೆ ಉಚ್ಚಿಲ ಬಡಾಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡಿನ ಮೂಡಬೆಟ್ಟು ಬಳಿಯಲ್ಲಿ ಸಣ್ಣ ನೀರಾವರಿ ಸುಮಾರು 45 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ದೊಡ್ಡ ತೋಡಿಗೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ಸ್ಥಳಕ್ಕಾಗಮಿಸಿದಾಗ ಈ ಸಮಸ್ಯೆ ಉದ್ಭವವಾಗಿದೆ. ಕುಡಿಯುವ ನೀರಿನ ಬವಣೆ ಮತ್ತು ಕೃಷಿ ಚಟುವಟಿಕೆಗೆ ಪೂರಕವಾಗಿ ನಿಗದಿಪಡಿಸಿದ ಸ್ಥಳಕ್ಕಿಂತಲೂ ಬೇರೆ ಸ್ಥಳದಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ನಡೆಸಬೇಕಿದೆ ಎಂದು ಸದಸ್ಯೆ ಆಗ್ರಹಿಸಿದರು. ಅದಕ್ಕೆ ಗ್ರಾ ಪಂ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಸ್ಥಳದಲ್ಲಿ ಜಮಾಯಿಸಿದ್ದ ಸ್ಥಳೀಯರು ಒತ್ತಡವನ್ನೂ ಹೇರಿದ್ದರು.

ಈ ಸಂದರ್ಭ ಜನಪ್ರತಿನಿಧಿಗಳು, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮತ್ತು ಸ್ಥಳೀಯರ ನಡುವೆ ಮಾತುಕತೆ ನಡೆಸಿ ಪರಸ್ಪರ ಹೊಂದಾಣಿಕೆ ಮೂಲಕ ಸಮನ್ವಯ ಸಾಧಿಸಿ ಅದಾಗಲೇ ನಿಗದಿಪಡಿಸಿದ ಉಭಯ ಸ್ಥಳಗಳನ್ನು ಬಿಟ್ಟು ಮತ್ತೊಂದೆಡೆ ಗುದ್ದಲಿ ಪೂಜೆ ನಡೆಸಲಾಯಿತು. ಆದರೂ ಸದಸ್ಯೆ ಶಕುಂತಳ ಮತ್ತು ಕೆಲ ಸ್ಥಳೀಯರು ತಮ್ಮ ಅಸಹನೆಯನ್ನು ಮತ್ತೆ ವ್ಯಕ್ತಪಡಿಸಿದ್ದು, ಸ್ಥಳೀಯ ಗ್ರಾ ಪಂ ಸದಸ್ಯೆಯಾಗಿ ಜನಪರ ನಿಲುವಿಗೆ ಬೆಲೆ ಇಲ್ಲದಂತಾಗಿದೆ ಎಂದು ತನ್ನ ಹತಾಶೆಯನ್ನು ಬಹಿರಂಗಗೊಳಿಸಿದರು.