ಕುಕ್ಕೆ ಕ್ಷೇತ್ರದಲ್ಲಿ ನೇತ್ರಾವತಿ ರಥಯಾತ್ರೆಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ

ಸುಬ್ರಹ್ಮಣ್ಯ : ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಪ್ರತಿಭಟನೆ ಮತ್ತೆ ತೀವ್ರಗೊಂಡಿದ್ದು, ಪಂಚತೀರ್ಥ ಸಪ್ತಕ್ಷೇತ್ರ ರಥಯತ್ರೆಗೆ ಇದೀಗ ಚಾಲನೆ ನೀಡಲಾಗಿದೆ.

ಪ್ರಸಿದ್ದ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, “ಮಾನವ ನೀರಿಲ್ಲದೇ ಬದುಕುವುದಕ್ಕೆ ಸಾಧ್ಯವಿಲ್ಲ. ಪ್ರಕೃತಿ ಸಹಜವಾಗಿ ಹರಿಯುವ ನದಿಯನ್ನು ತಿರುಗಿಸುವ ಯೋಜನೆ ಪ್ರಕೃತಿ ಧರ್ಮಕ್ಕೆ ವಿರುದ್ಧವಾದುದು. ಕುಮಾರಧಾರ ಮತ್ತು ನೇತ್ರಾವತಿ ನದಿ ತಟದಲ್ಲಿ ಅತ್ಯಂತ ವಿಶಿಷ್ಠವಾದಂತಹ ಎಲ್ಲಾ ಜಾತಿ ಮತ್ತು ಧರ್ಮಕ್ಕೆ ಸಂಬಂಧಪಟ್ಟ ಕ್ಷೇತ್ರಗಳಿವೆ. ಈ ಎಲ್ಲಾ ಕ್ಷೇತ್ರಗಳನ್ನೂ ಕೂಡಾ ಅನುಸರಿಸಿ ಇಂದು ಜಾತ್ಯತೀತವಾಗಿ ಮತ್ತು ಧರ್ಮಾತೀತವಾಗಿ ಮತ್ತು ರಾಜಕೀಯೇತರವಾಗಿ ದೊಡ್ಡ ಹೋರಾಟವನ್ನು ಆರಂಭಿಸಿದ್ದೇವೆ. ಇಷ್ಟರತನಕ ಈ ಯೋಜನೆ ವಿರುದ್ದ ಅನೇಕ ರೀತಿಯ ಹೋರಾಟಗಳು ನಡೆದರೂ ಹೆಚ್ಚಿನ ಪ್ರತಿಫಲ ದೊರಕಿಲ್ಲ. ಆದರೆ ಈ ಯಾತ್ರೆ ಗರಿಷ್ಠಮಟ್ಟದ ಹೋರಾಟವಾಗಿ ಸೂಕ್ತಫಲ ದೊರಕುವಂತಾಗಲಿ” ಎಂದರು.

ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕನ್ಯಾನ ಮಠದ ಶ್ರೀ ಮಹಾಬಲ ಸ್ವಾಮೀಜಿ, ಸಂಸದ ನಳಿನಕುಮಾರ್ ಕಟೀಲ್, ಶಾಸಕ ಎಸ್ ಅಂಗಾರ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.