ನಗರ ಪಾಲಿಕೆ ಆಡಳಿತದ ವಿರುದ್ಧ ಪಾಲೆಮಾರ್ ಸಮರ ಮುಂದರಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶುದ್ಧ ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಸಮರ ಪ್ರಾರಂಭಿಸಿದ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮಂಗಳವಾರ ಮತ್ತೆ ಸುದ್ದಿಗಾರರಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ತಾನು ಈ ಹಿಂದೆ ಮಾಡಿದ ಆರೋಪ ಸತ್ಯವಾಗಿದೆ ಎಂದ ಅವರು, “ಮಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂಗೆ ಕಲುಷಿತ ನೀರು ಸೇರುತ್ತಿದೆ. ತುಂಬೆಯಲ್ಲಿ ಒಳಚರಂಡಿ ನೀರನ್ನು ಹೊಳೆಗೆ ಹರಿದು ಬಿಡಲಾಗುತ್ತಿದೆ. ನೀರು ಸಮರ್ಪಕವಾಗಿ ಶುದ್ಧೀಕರಣಗೊಳ್ಳುತ್ತಿಲ್ಲ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಪಾಲಿಕೆ ಮುಂದಾಗಬೇಕು. ಪಾಲಿಕೆ ಅಧಿಕಾರಿಗಳು, ಆಡಳಿತ ಹೊಣೆಯರಿತು ಕೆಲಸ ಮಾಡಬೇಕು” ಎಂದು ಒತ್ತಾಯಿಸಿದರು.

“ನೀರು ಕಲುಷಿತಗೊಂಡಿರುವುದಕ್ಕೆ ತನ್ನ ಬಳಿ ದಾಖಲೆ ಇದ್ದು, ಮೂರು ತಿಂಗಳ ಕಾಲ ನಾನು ಅದನ್ನು ಅಧ್ಯಯನ ಮಾಡಿ ಕೊಟ್ಟಿದ್ದೆ. ಆದರೆ ಮೇಯರ್, ಶಾಸಕರು ಅದನ್ನು ಸುಳ್ಳು ಎಂದು ಜನರಿಗೆ ಹೇಳಿ ತಪ್ಪು ಅಭಿಪ್ರಾಯವನ್ನು ಮೂಡಿಸಿದ್ದಾರೆ” ಎಂದು ಪಾಲೇಮಾರ್ ಹೇಳಿದರು.

“ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೊರಬೇಕು” ಎಂದವರು ಆಗ್ರಹಿಸಿದರು.