ದೆಹಲಿಯ ಕೆಂಪು ಕೋಟೆ ತನ್ನದೆಂದು ಬಿಂಬಿಸಿ ಇತಿಹಾಸ ತಿರುಚಿದ ಪಾಕಿಸ್ತಾನ

ಬೀಜಿಂಗ್ : ಚೀನಾದ ಶಾಂಘೈ ಸಹಕಾರ ಸಂಘಟನೆ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಎರಡು ನೂತನ ಸದಸ್ಯ ರಾಷ್ಟ್ರಗಳಿಗೆ ಪ್ರವೇಶ ನೀಡಲಾಗಿದ್ದು, ಭಾರತ ಮತ್ತು ಪಾಕಿಸ್ತಾನ ಹೊಸ ಸದಸ್ಯ ರಾಷ್ಟ್ರಗಳಾಗಿವೆ. ತಮ್ಮ ಇತಿಹಾಸವನ್ನು ಸಾರಲು ಎರಡೂ ದೇಶಗಳು ಮೊಘಲ್ ದೊರೆ ಶಹಜಹಾನನನ್ನು ಬಳಸಿಕೊಂಡಿರುವುದು ಕುತೂಹಲಕಾರಿಯಾಗಿದೆ. ಮೊಘಲರ ಪೂರ್ವಿಕರಾದ ತೈಮೂರ್ ವಂಶಜರನ್ನು ಕಜಾಕಸ್ಥಾನ್ ಬಿಂಬಿಸಿದೆ. ಆದರೆ ಭಾರತದ ತ್ರಿವರ್ಣ ಧ್ವಜ ಹಾರಾಡುತ್ತಿರುವ ಕೆಂಪುಕೋಟೆಯ ಚಿತ್ರವನ್ನು ಬಿತ್ತರಿಸುವ ಮೂಲಕ ಪಾಕಿಸ್ತಾನ  ಅದನ್ನು ಲಾಹೋರಿನಲ್ಲಿರುವ ಶಾಲಮಾರ್ ಉದ್ಯಾನ ಎಂದು ಬಿಂಬಿಸಿರುವುದು ವಿವಾದ ಸೃಷ್ಟಿಸಿದೆ.

ಮೊಘಲ್ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ಶಹಜಹಾನನ ಅದ್ಭುತ ಅರಮನೆಗಳು ಮತ್ತು ಅಲಂಕಾರಿಕ ಕೊಳಗಳಲ್ಲಿ ಕಾಣಬಹುದು ಎಂದು ಸಾರುವ ಕೆಂಪುಕೋಟೆಯ ಚಿತ್ರಣಗಳನ್ನು ಪಾಕಿಸ್ತಾನ ಪ್ರದರ್ಶಿಸಿದೆ. ಭಾರತದ ವತಿಯಿಂದ ತಾಜ್ ಮಹಲ್ ಮತ್ತು ಕೆಂಪುಕೋಟೆಯನ್ನು ಪ್ರದರ್ಶಿಸಲಾಗಿದ್ದು, ಕ್ರಿಶ 1631-48ರ ಅವಧಿಯಲ್ಲಿ ನಿರ್ಮಿಸಿರುವ ತಾಜ್ ಮಹಲ್ ಮುಸ್ಲಿಂ ಭಾರತದ ಒಂದು ಅಮೂಲ್ಯ ರತ್ನ ಎಂದು ಬಣ್ಣಿಸಲಾಗಿದೆ. ಇತ್ತ ಭಾರತ ಸರ್ಕಾರ ತನ್ನ ಗಡಿಪ್ರದೇಶದಲ್ಲಿನ ಅಭಿವೃದ್ಧಿಯನ್ನು ಬಿಂಬಿಸಲು ವಿದ್ಯುತ್ ದೀಪಗಳಿಂದ ಕಂಗೊಳಿಸುವ ಸ್ಪೇನ್ ಮೊರಾಕೋ ಗಡಿಪ್ರದೇಶವನ್ನು ಬಿಂಬಿಸಿರುವ ಹಿನ್ನೆಲೆಯಲ್ಲೇ ಪಾಕಿಸ್ತಾನ ಭಾರತದ ಕೆಂಪುಕೋಟೆಯನ್ನು ತನ್ನ ದೇಶದ ಉದ್ಯಾನ ಎಂದು ಬಿಂಬಿಸಿರುವುದು ಎರಡೂ ದೇಶಗಳನ್ನು ಮುಜುಗರಕ್ಕೀಡುಮಾಡಿದೆ.

ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಪ್ರದರ್ಶನದಲ್ಲಿ ತಮ್ಮ ದೇಶದ ಪರಂಪರೆಯನ್ನು ಬಿಂಬಿಸುವಾಗ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ ಎನ್ನುವುದನ್ನು ಪಾಕಿಸ್ತಾನ ಅರಿಯಬೇಕಿದೆ. ಪಾಕಿಸ್ತಾನದ ಈ ವರ್ತನೆ ಪೊಳ್ಳು ಅಹಮಿಕೆಯ ಸಂಕೇತವಾಗಿದ್ದು, ಜಾಗತಿಕ ಮಟ್ಟದಲ್ಲಿ ಅವಮಾನ ಎದುರಿಸುವಂತಾಗಿದೆ. ಉಭಯ ರಾಷ್ಟ್ರಗಳು ತಮ್ಮ ಪೂರ್ವೇತಿಹಾಸವನ್ನು ಬಿಂಬಿಸಲು ಒಂದಾಗಿ ಶ್ರಮಿಸಿದ್ದರೆ ಹೆಚ್ಚು ಸಾರ್ಥಕವಾಗುತ್ತಿತ್ತು.