ಪಾಕಿಸ್ತಾನೀಯರಿಂದಲೇ ತಮ್ಮ ದೇಶ, ಇಸ್ಲಾಮಿನ ತೇಜೋವಧೆ : ಮಲಾಲ

 ಪಾಕ್ ವಿದ್ಯಾರ್ಥಿಯ ಹತ್ಯೆಗೆ ಖಂಡನೆ

ಲಂಡನ್ :  ಧರ್ಮನಿಂದನೆ ಮಾಡಿದ್ದಾನೆಂದು ಹೇಳಲಾದ ಪಾಕಿಸ್ತಾನಿ ವಿದ್ಯಾರ್ಥಿಯ ಕೊಲೆ ಘಟನೆಯ ಬಗ್ಗೆ  ಆಕ್ರೋಶ ವ್ಯಕ್ತಪಡಿಸಿರುವ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕøತೆ ಮಲಾಲ ಯೂಸುಫ್ಝಾಯಿ, ಇಸ್ಲಾಂ ಮತ್ತು ಪಾಕಿಸ್ತಾನದ ತೇಜೋವಧೆಗೆ  ಪಾಕಿಸ್ತಾನೀಯರೇ ಕಾರಣ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವ ಎಂಬಲ್ಲಿರುವ ಅಬ್ದುಕ್ಲ್  ವಾಲಿ ಖಾನ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಮಶಾಲ್ ಖಾನ್ ಎಂಬವನು ಅಂತರ್ಜಾಲದಲ್ಲಿ ಧರ್ಮನಿಂದನೆಗೈಯ್ಯುವ ಪೋಸ್ಟ್ ಮಾಡಿದ್ದಾನೆಂದು ಆರೋಪಿಸಿ  ನೈತಿಕ ಗೂಂಡಾಗಿರಿ ಮಾಡುತ್ತಿದ್ದ ಅದೇ ಸಂಸ್ಥೆಯ ವಿದ್ಯಾರ್ಥಿಗಳ ಗುಂಪೊಂದು ಆತನಿಗೆ ಥಳಿಸಿ ನಿರ್ದಯವಾಗಿ ಗುಂಡಿಕ್ಕಿ ಸಾಯಿಸಿತ್ತು.

ಪಾಕಿಸ್ತಾನೀಯಳೇ ಆಗಿರುವ 19 ವರ್ಷದ ಮಲಾಲ ತನ್ನ ವೀಡಿಯೋ ಸಂದೇಶದಲ್ಲಿ “ಈ ಘಟನೆ ಕ್ರೌರ್ಯದ ಪರಮಾವಧಿ. ನಾನು ವಿದ್ಯಾರ್ಥಿಯ ತಂದೆಯ ಬಳಿ ಮಾತನಾಡಿದ್ದೇನೆ. ಅವರು ಶಾಂತಿ ಮತ್ತು ತಾಳ್ಮೆಯ ಸಂದೇಶ ನೀಡಿದ್ದಾರೆ. ನಾನು ಇದನ್ನು ಪ್ರಶಂಸಿಸುತ್ತೇನೆ” ಎಂದಿದ್ದಾರೆ.

“ಎಲ್ಲೆಡೆ ಇಸ್ಲಾಮೋಫೋಬಿಯಾ ಇದೆ, ನಮ್ಮ ದೇಶದ ತೇಜೋವಧೆ ಮಾಡಲಾಗುತ್ತಿದೆ ಎಂದು ನಾವು ದೂರುತ್ತೇವೆ. ಆದರೆ ಯಾರೂ ಹೀಗೆ ಮಾಡುತ್ತಿಲ್ಲ. ನಾವೇ ನಮ್ಮ ಕೈಯ್ಯಾರೆ ಹೀಗೆ ಮಾಡುತ್ತಿದ್ದೇವೆ. ಪಾಕಿಸ್ತಾನದ ತೇಜೋವಧೆಯಾಗಿದ್ದರೆ ಅದಕ್ಕೆ ನಾವೇ ಕಾರಣ” ಎಂದರು ಮಲಾಲ.

“ಇದು ಕೇವಲ ಮಶಾಲ್ ಖಾನ್ ಅವರ ಅಂತ್ಯಕ್ರಿಯೆಯಲ್ಲ,  ಇದು ನಮ್ಮ ಧರ್ಮದ  ಬೋಧನೆಗಳ ಅಂತ್ಯಕ್ರಿಯೆ. ಇಸ್ಲಾಂ ನಮಗೆ ಶಾಂತಿ ಮತ್ತು ತಾಳ್ಮೆಯನ್ನು ಕಲಿಸಿದೆ ಎಂಬುದನ್ನು ನಾವು ಮರೆತಿದ್ದೇವೆ. ಎಲ್ಲರೂ ಮಶಾಲ್ ಖಾನ್ ಕುಟುಂಬಕ್ಕೆ ನ್ಯಾಯಕ್ಕಾಗಿ ಹೋರಾಡಬೇಕು. ಯಾರು ಕೂಡ ಮೌನವಾಗಿರಬಾರದು” ಎಂದು ಮಲಾಲ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.