ಅತಿಥೇಯ ಆಂಗ್ಲರನ್ನು ಮಣಿಸಿ ಪಾಕಿಸ್ತಾನ ಫೈನಲಿಗೆ

ಐಸಿಸಿ ಚಾಂಪಯನ್ ಟ್ರೋಫಿ

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

ಸತತ ಹ್ಯಾಟ್ರಿಕ್ ಗೆಲುವುಗಳಿಂದ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸುವ ಫೆವರಿಟ್ ತಂಡವಾಗಿ ಮೂಡಿ ಬಂದಿದ್ದ ಆತಿಥೇಯ ಇಂಗ್ಲೆಂಡ್ ತಂಡವನ್ನು ಸರ್ವಾಂಗೀಣ ಪ್ರದರ್ಶನದ ಮೂಲಕ ಸೋಲಿಸಿದ ಪಾಕಿಸ್ತಾನ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲಿಗೆ ಪ್ರವೇಶಿಸಿದೆ. ಇಂತಹ ಫಲಿತಾಂಶವೊಂದು ಈ ಪಂದ್ಯದಲ್ಲಿ ಬರುತ್ತದೆ  ಎಂದು ಯಾರೂ ಎಣಿಸಿರಲಿಲ್ಲ.

ಒಂದು ಸಾಂಘಿಕ ಹೋರಾಟದಲ್ಲಿ ಪಾಕಿಸ್ತಾನ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಅದ್ಭುತ ಎನ್ನಬಹುದಾದ ಗೆಲುವು ಸಾಧಿಸಿ ಪರಾಕ್ರಮ ಮೆರೆದಿದೆ. ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗಿನಲ್ಲಿ ಆತಿಥೇಯ ಆಂಗ್ಲ ತಂಡಕ್ಕೆ ಸವಾಲಾಗಿ ನಿಂತ ಪಾಕಿಸ್ತಾನೀಯರು ಅರ್ಹವಾಗಿಯೇ ಗೆಲುವನ್ನು ಸಾಧಿಸಿ ಚಾಂಪಿಯನ್ಸ್ ಟ್ರೋಫಿಯತ್ತ ಕೈಬೀಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡದ ಪ್ರಶಸ್ತಿ ಗೆಲುವಿನ ಕನಸು ನುಚ್ಚುನೂರಾಗಿದೆ. ಟೂರ್ನಿಯ ಎರಡು ವರ್ಷಗಳ ಇತಿಹಾಸದಲ್ಲಿ ಆಂಗ್ಲರು ಒಂದು ಬಾರಿಯೂ ಪ್ರಶಸ್ತಿ ಜಯಿಸಿಲ್ಲ.

ಪಾಕಿಸ್ತಾನ ಈ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಭಾರತದ ಎದುರು ಸೋತ ನಂತರ ಈ ಸೋಲನ್ನೆ ಗೆಲುವನ್ನಾಗಿಸಿ ಈಗ ಫೈನಲಿಗೆ ಪ್ರವೇಶಿಸಿದೆ ಎಂದಾದರೆ ಅದೊಂದು ಸಾಂಘಿಕ ಪ್ರಯತ್ನಕ್ಕೆ ದೊರೆತ  ಫಲ ಎನ್ನಬಹುದು. ಮುಖ್ಯವಾಗಿ ಇಲ್ಲಿ  ಪಾಕಿಸ್ತಾನ ತಂಡದ ನಾಯಕನ ಕ್ಯಾಪ್ಟನ್ಸಿಯನ್ನು ಮೆಚ್ಚಲೇಬೇಕು. ಭಾರತ ವಿರುದ್ಧ ಪಾಕಿಸ್ತಾನ ಸೋತಾಗ ಎಲ್ಲರ ಟೀಕೆಗಳನ್ನು ಎದುರಿಸಿಯೂ ಸರ್ಫರಾಜ್ ಅಹ್ಮದ್ ತಾಳ್ಮೆಯಿಂದಲೇ ತಂಡವನ್ನು ಮುನ್ನಡೆಸಿದ ರೀತಿ ಪ್ರಶಂಸೆಗೆ ಪಾತ್ರವಾಗಿದೆ.

ಲಂಡನ್ ನ ಕಾರ್ಡಿಫ್ ಸೋಫಿಯಾ ಗಾರ್ಡನ್ ಮೈದಾನದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡಕ್ಕೆ ಪಾಕ್ ವೇಗಿಗಳು ಕಂಟಕರಾದರು. ಟೂರ್ನಿಯುದ್ದಕ್ಕೂ ಭರವಸೆಯ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಬ್ಯಾಟ್ಸಮನ್ನರು ಈ ಪಂದ್ಯದಲ್ಲಿ ಮಂಕಾಗಿಬಿಟ್ಟರು . ಮಧ್ಯಮ ಕ್ರಮಾಂಕದ ಜೋ ರೂಟ್ ಬಾರಿಸಿದ 46 ರನ್ನುಗಳೇ ಗರಿಷ್ಠ ಸ್ಕೋರ್. ಆರಂಭಿಕ ಆಟಗಾರ ಜೋನಿ ಬೈರ್ ಸ್ಟೋ (43 ರನ್), ಇಯಾನ್ ಮೊರ್ಗನ್ (33 ರನ್), ಬೆನ್ ಸ್ಟೋಕ್ಸ್ (34 ರನ್) ತಂಡವನ್ನು  ಆಧರಿಸಿದರೂ ತಂಡದ ಮೊತ್ತವನ್ನು 250ರ ಗಡಿ ತಲುಪಿಸಲು ವಿಫಲರಾದರು.

ಅಂತಿಮವಾಗಿ ಇಂಗ್ಲೆಂಡ್ ತಂಡ ರನ್ನಿಗಾಗಿ ಪರದಾಟ ನಡೆಸಿ 211 ರನ್ನುಗಳಿಗೆ ಆಲೌಟಾಯಿತು. ಸಂಘಟಿತ ಬೌಲಿಂಗ್ ನಡೆಸಿದ ಪಾಕಿಸ್ತಾನಿ ಬೌಲರುಗಳು ಆಂಗ್ಲರ ಬ್ಯಾಟಿಂಗ್ ಬೆನ್ನೆಲುಬು ದಾಂಡಿಗರನ್ನೇ ಧರೆಗುರುಳಿಸಿ ಮೇಲುಗೈ ಸಾಧಿಸಿದರು.  ಪಾಕ್ ಪರ ಹಸನ್ ಅಲಿ 35 ರನ್ನಿಗೆ 3 ವಿಕೆಟ್ ಪಡೆದು ಆಂಗ್ಲರ  ಪತನಕ್ಕೆ ಪ್ರಮುಖ ಕಾರಣರಾದರು. ಉಳಿದಂತೆ ಜುನೈದ್ ಖಾನ್ ಹಾಗೂ ರುಮ್ಮಾನ್ ರೈಸ್ ತಲಾ ಎರಡೆರಡು ವಿಕೆಟ್ ಪಡೆದರು.

ಆಂಗ್ಲರ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ಪಾಕಿಸ್ತಾನಿ ಆಟಗಾರರು ನಿಧಾನ ಗತಿಯಲ್ಲೇ ಬ್ಯಾಟಿಂಗ್ ನಡೆಸಿದರೂ ಗೆಲುವನ್ನು ಖಾತ್ರಿಗೊಳಿಸಿದರು. ಆರಂಭಿಕ ಆಟಗಾರರಾದ ಅಜರ್ ಅಲಿ (76 ರನ್) ಹಾಗೂ ಫಖರ್ ಝಮ್ (57 ರನ್) ಮೊದಲ ವಿಕೆಟಿಗೆ 118 ರನ್ ಸೇರಿಸಿದರು. ಇವರಿಬ್ಬರು ಔಟಾದ ಬಳಿಕ ಬಾಬರ್ ಅಜಮ್ (38 ರನ್) ಹಾಗೂ ಮೊಹಮ್ಮದ್ ಹನೀಫ್ (31 ರನ್) ಅಜೇಯ ಬ್ಯಾಟಿಂಗ್ ಪ್ರದರ್ಶನ ನೀಡಿ ಪಾಕಿಸ್ತಾನ ತಂಡವನ್ನು 37.1 ಓವರುಗಳಲ್ಲೇ ಗೆಲ್ಲಿಸಿ, ಅಪೂರ್ವವೆನಿಸಿದ ಜಯವನ್ನು ದಾಖಲಿಸಿಕೊಂಡರು.

ಅಂತೂ ಆಂಗ್ಲರು ಹ್ಯಾಟ್ರಿಕ್ ಜಯದ ಉತ್ಸಾಹದಲ್ಲಿ ಮೈಮರೆತು ಈ ಸೋಲನ್ನು ಅಪ್ಪಿಕೊಂಡಿತು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಕಳೆದ ಮೂರು ಬಾರಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲಿನಲ್ಲೇ ಎಡವಿರುವ ಪಾಕಿಸ್ತಾನ ಈ ಬಾರಿ ಫೈನಲಿಗೆ ಪ್ರವೇಶಿಸಿ ಹೊಸ ಇತಿಹಾಸಕ್ಕೆ ಕಾರಣವಾಯಿತು. ಆಂಗ್ಲ ಬ್ಯಾಟ್ಸಮನ್ನರಾದ ಜೋನಿ ಬೈರ್ ಸ್ಟೋ, ಮೊರ್ಗನ್ ಹಾಗೂ ಬೆನ್ ಸ್ಟೋಕ್ಸ್ ವಿಕೆಟ್ ಗಳನ್ನು ಪಡೆದು ಮಿಂಚಿದ ಪಾಕ್ ಬೌಲರ್ ಹಸನ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.