ಪಾಕಿಸ್ತಾನೀಯರಿಗೆ `ಚಾಂಪಿಯನ್ಸ್ ಟ್ರೋಫಿ’

 ಫಲಿಸಿದ ರಮ್ಜಾನ್ ದುಆ

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

ಫಾಖರ್ ಝಮಾನ್ ಅವರ ಆಕರ್ಷಕ ಶತಕ ಹಾಗೂ ಬೌಲರುಗಳ ವಿಶ್ವಾಸನೀಯ ಉತ್ಕೃಷ್ಟ ಬೌಲಿಂಗಿನಿಂದ ವಿರಾಟ್ ಕೊಹ್ಲಿ ಪಡೆ ಬಾಲ ಮುದುಡಿಕೊಂಡ ಪರಿಣಾಮ ಸರ್ಫರಾಜ್ ಅಹ್ಮದ್ ಸಾರಥ್ಯದ  ಪಾಕಿಸ್ತಾನ  ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ  ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಹೊಸ ಚಾಂಪ್ಯನ್ ಸಿಕ್ಕಿದೆ. ಜೊತೆಗೆ ಪಾಕಿಸ್ತಾನೀಯರ ರಮ್ಜಾನ್ ದುಆ ಫಲಿಸಿದೆ.

ರೋಮಾಂಚಕ ಹಣಾಹಣಿಯ ಈ ಫೈನಲ್ ಮುಖಾಮುಖಿ ಕ್ರಿಕೆಟ್ ಜಗತ್ತನ್ನೇ ತನ್ನತ್ತ ಸೆಳೆದಿತ್ತು. ಉಭಯ ತಂಡಗಳ ಕ್ರಿಕೆಟ್ ಪ್ರೇಮಿಗಳಿಗಂತೂ ಈ ಪಂದ್ಯ ಪ್ರತಿಷ್ಠೆಯಾದಾಗಿತ್ತು.  ಭಾರತೀಯರನೇಕರು ಕೊಹ್ಲಿ ಪಡೆಯ ಗೆಲುವಿಗೆ ಹೋಮ-ಹವನ ನಡೆಸಿದ್ದರು. ಪಾಕಿಸ್ತಾನದಲ್ಲೂ ಗೆಲುವಿಗಾಗಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ರಮ್ಜಾನ್ ಉಪವಾಸದಲ್ಲಿದ್ದ ಪಾಕಿಸ್ತಾನೀಯರ ಪ್ರಾರ್ಥನೆ  ಸರ್ಫರಾಜ್ ಅಹ್ಮದ್ ಸಾರಥ್ಯಕ್ಕೆ ಶ್ರೀರಕ್ಷೆಯಾಯಿತು ಎಂದೇ ಹೇಳಬೇಕು.

ಭಾರತ ಪ್ರಮುಖ ಕ್ರಿಕೆಟ್ ಟೂರ್ನಿಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಸೋತ ದಾಖಲೆ ಇಲ್ಲದಿದ್ದರೂ ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಪಾಕಿಸ್ತಾನ ಪರಿಸ್ಥಿತಿಗೆ ತಕ್ಕಂತೆ ತನ್ನ ಸಾಮರ್ಥ್ಯವನ್ನು ವೃದ್ದಿಸಿಕೊಂಡೇ ಈ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೇಡು ತೀರಿಸಿಕೊಂಡು ಚೊಚ್ಚಲ ಅವಕಾಶವನ್ನೇ ಸ್ಮರಣೀಯವನ್ನಾಗಿಸಿದೆ.

ಭಾನುವಾರ ಲಂಡನಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ  ಬ್ಯಾಟಿಂಗ್ ಪಡೆ ನಡೆಸಿದ ಅಬ್ಬರದ ಆಟ ಮನಮೋಹಕವಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ  ತಂಡ ಫಾಖರ್ ಝಮಾನ್ ಅವರ ಸಿಡಿಲಬ್ಬರದ ಶತಕ ಹಾಗೂ ಅಜರ್ ಅಲಿ, ಮೊಹಮ್ಮದ್ ಹಫೀಝ್ ಅವರುಗಳ ಆಕರ್ಷಕ ಅರ್ಧ ಶತಕಗಳ ನೆರವಿನಿಂದ 50 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿತು.

ಪಾಕಿಸ್ತಾನೀಯರ ಇನ್ನಿಂಗ್ಸಿನಲ್ಲಿ ಸೊಬಗಿನ ಬ್ಯಾಟಿಂಗ್ ಗಮನ ಸೆಳೆಯಿತು. ಈ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಫಾಖರ್ ಝಮಾನ್ ಹಾಗೂ ಅಜರ್ ಅಲಿ ಮೊದಲ ವಿಕೆಟಿಗೆ ಜವಾಬ್ದಾರಿಯ 128 ರನ್ ಜೊತೆಯಾಟ ನೀಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆರಂಭದಲ್ಲಿ ಜಸ್ ಪ್ರಿತ್ ಬುಮ್ರಾ ಓವರಿನಲ್ಲಿ ಕ್ಯಾಚಿತ್ತು ಔಟಾಗಿದ್ದ ಫಾಖರ್ ಝಮಾನಗೆ ನೋಬಾಲ್ ಜೀವದಾನ ನೀಡಿತು.

ಆದರೆ, ಈ ಜೀವದಾನದಲ್ಲೇ ಸುಂದರ ಇನ್ನಿಂಗ್ಸ್ ಕಟ್ಟಿದ ಫಾಖರ್ ಝಮಾನ್ 106 ಎಸೆತಗಳಲ್ಲಿ 114 ರನ್ ಗಳಿಸಿ ತನ್ನ ಚೊಚ್ಚಲ ಶತಕವನ್ನು ದಾಖಲಿಸಿಕೊಂಡರು. ಅಜರ್ ಅಲಿ 59 ರನ್ ಹಾಗೂ ಬಾಬರ್ ಅಜಮ್ 46ರನ್ ಗಳಿಸಿದರು. ಮೊಹಮ್ಮದ್ ಹಫೀಜ್ (57 ರನ್) ಮತ್ತು ಇಮಾದ್ ವಾಸಿಂ (25 ರನ್) ಕೊನೆಯಲ್ಲಿ ಒಳ್ಳೆಯ ಫಿನಿಶಿಂಗ್ ಕೊಟ್ಟು 71 ರನ್ ಅಜೇಯ ಜತೆಯಾಟ ನೀಡಿ ಪಾಕಿಸ್ತಾನ  ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಭಾರತೀಯ ಬೌಲರುಗಳು ಟೂರ್ನಿಯಲ್ಲಿ ಮೊದಲ ಬಾರಿಗೆ ಕಳಪೆ ಬೌಲಿಂಗ್ ನಡೆಸಿದರು. ಭುವನೇಶ್ವರ ಕುಮಾರ್ ಅವರನ್ನು ಹೊರತುಪಡಿಸಿ ಸ್ಟಾರ್ ಬೌಲರುಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಹಾಗೂ ಜಸ್ ಪ್ರಿತ್ ಬುಮ್ರಾ ಪಾಕ್ ದಾಂಡಿಗರಿಂದ ನಿರ್ದಾಯವಾಗಿ ದಂಡಿಸಲ್ಪಟ್ಟರು. ಇವರಿಂದ ಪಾಕಿಸ್ತಾನೀಯರ ಬ್ಯಾಟಿಂಗ್ ಆರ್ಭಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಆದರೆ, ಪಾಕಿಸ್ತಾನದ ಪ್ರಚಂಡ ವೇಗಿಗಳ ಪಡೆಯನ್ನು ದಂಡಿಸಿ ಈ ಬೃಹತ್ ಮೊತ್ತವನ್ನು ಬೆನ್ನಟ್ಟುವುದು ಭಾರತೀಯ ಬ್ಯಾಟ್ಸಮನ್ನರಿಗೆ ಕಬ್ಬಿಣದ ಕಡಲೆಯಾಯಿತು. ಈ ಬೃಹತ್ ಮೊತ್ತವನ್ನೇ ನೋಡಿ ಭಾರತೀಯರು ಆರಂಭದಲ್ಲೇ ನರ್ವಸ್ ಆಗಿದ್ದರು. ಟೂರ್ನಿಯುದ್ದಕ್ಕೂ ಭರವಸೆಯ ಬ್ಯಾಟಿಂಗ್ ನಡೆಸಿ ಭಾರತದ ಗೆಲುವಿಗೆ ಕಾರಣರಾಗಿದ್ದ ರೋಹಿತ್ ಶರ್ಮ-ಶಿಖರ್ ಧವನ್ ಜೋಡಿ  ಮೊದಲ ಬಾರಿಗೆ ಎಡವಿತು. ರೋಹಿತ್,  ಮೊಹಮ್ಮದ್ ಅಮೀರ್ ಅವರ ಯಾರ್ಕರ್ ಎಸೆತದಲ್ಲಿ ಎಲ್‍ಬಿಡಬ್ಲ್ಯುಗೆ ಬಲಿಯಾದರು. ಅವರು ಸೊನ್ನೆ ಸುತ್ತಿಕೊಂಡರು. ನಂತರ ನಾಯಕ ವಿರಾಟ್ ಕೊಹ್ಲಿ, ಎಂ ಎಸ್ ಧೋನಿ, ಕೇದಾರ್ ಜಾಧವ್ ಇವರೆಲ್ಲರೂ ಪಾಕ್ ಬೌಲರುಗಳ ಕರಾರುವಾಕ್ಕಾದ ದಾಳಿಗೆ ಒಂದಂಕಿ ಮೊತ್ತಕ್ಕೆ ತೃಪ್ತಿಪಟ್ಟರು. ಧವನ್ (21 ರನ್), ಯುವರಾಜ್ ಸಿಂಗ್  (22 ರನ್)  ಹಾಗೂ  ಹಾರ್ದಿಕ್ ಪಾಂಡ್ಯಾ  ಕೊಂಚ ಭರವಸೆಯನ್ನು ಮೂಡಿಸಿದರು. ಪಾಂಡ್ಯಾ ಸ್ಪೋಟಕ ಬ್ಯಾಟಿಂಗ್ ನಡೆಸಿ  43 ಎಸೆತಗಳಲ್ಲಿ 76 ರನ್ ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ಅಂತಿಮವಾಗಿ ಭಾರತ 158 ರನ್ನುಗಳಿಗೆ ಆಲೌಟಾಗಿ, 180  ರನ್ ಭಾರಿ ಅಂತರದ ಸೋಲನ್ನು ಕಂಡಿತು.

ಪಾಕಿಸ್ತಾನ ತಂಡದ ಪರ ಮೊಹಮ್ಮದ್ ಅಮೀರ್ ಆರಂಭದಲ್ಲಿ  ಘಾತುಕ ಬೌಲಿಂಗ್ ನಡೆಸಿ ರೋಹಿತ್, ಧವನ್, ಕೊಹ್ಲಿ ವಿಕೆಟುಗಳ ಪತನಕ್ಕೆ (16 ರನ್ನಿಗೆ 3 ವಿಕೆಟ್) ಕಾರಣರಾದರು. ಹಸನ್ ಅಲಿ ಮೂರು ವಿಕೆಟ್ ಹಾಗೂ ಸ್ಪಿನ್ನರ್  ಶಾದಾಬ್ ಖಾನ್ ಎರಡು ವಿಕೆಟ್ ಪಡೆದು ಮಿಂಚಿದರು.

ಈ ಪಂದ್ಯದಲ್ಲಿ ಸ್ಪೋಟಕ ಆಟವಾಡಿದ ಫಾಖರ್ ಝಮಾನ್ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.