ಅಣ್ವಸ್ತ್ರ ಪ್ರಯೋಗದ ಬಗ್ಗೆ ಪಾಕಿಸ್ತಾನ ಬೊಗಳೆ ಬಿಡುತ್ತಿದೆ’

ಬ್ರಿಗೇಡಿಯರ್ ಗುರ್ಮಿತ್ ಕನ್ವಲ್

ನಿವೃತ್ತ ಬ್ರಿಗೇಡಿಯರ್ ಗುರ್ಮಿತ್ ಕನ್ವಲ್ ಅವರು ಗಡಿ ನಿಯಂತ್ರಣ ರೇಖೆಯಲ್ಲಿರುವ ಗುರೆಝ್ ಸೆಕ್ಟರಿನ ಇನಫೆಂಟ್ರಿ ಬ್ರಿಗೇಡ್ ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸುವ ಆರ್ಟಿಲ್ಲರಿ ರೆಜಿಮೆಂಟಿನ ನೇತೃತ್ವ ವಹಿಸಿದವರು.  ಭಾರತ-ಪಾಕಿಸ್ತಾನ ನಡುವಣ ಸಂಬಂಧಗಳಲ್ಲಿ ಇತ್ತೀಚಿಗಿನ ಬೆಳವಣಿಗೆಗಳ ಬಗ್ಗೆ ಅವರೊಂದಿಗೆ ಮಾತನಾಡಿದಾಗ :


  • ಇತ್ತೀಚಿಗಿನ ದಿನಗಳಲ್ಲಿ ಭಾರತ-ಪಾಕ್ ವೈರತ್ವ ಹೆಚ್ಚಾಗಿದೆ. ಈಗಿನ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು ?

ಎರಡೂ ದೇಶಗಳ ನಡುವಣ ಸಂಬಂಧ ಬಹಳಷ್ಟು ಹದಗೆಟ್ಟಿದೆ. ಪಾಕಿಸ್ತಾನದ ಸೇನೆ ಮತ್ತು ಐ ಎಸ್ ಐ ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ಉಗ್ರವಾದವನ್ನು ಬೆಂಬಲಿಸುವುದನ್ನು ನಿಲ್ಲಿಸದೇ ಇದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಂಭವವಿದೆ.


  • 2003ಕ್ಕಿಂತ ಮೊದಲು ಎರಡೂ ದೇಶಗಳ ಸೇನೆಗಳಿಂದ ಗಡಿಯಾಚೆಗಿನ ದಾಳಿಗಳು ಸಾಮಾನ್ಯವಾಗಿದ್ದವು. ಇದು ನಿಜವೇ ?

ಇದು ತಪ್ಪು. ಭಾರತದ ವಿಚಾರದಲ್ಲಿ ಹೇಳುವುದಾದರೆ ಪಾಕಿಸ್ತಾನ ಸೇನೆಯಿಂದ ಪೈಶಾಚಿಕ ಕೃತ್ಯಗಳು ನಡೆದ ಹೊರತಾಗಿ ಬೇರೆ ಸಂದರ್ಭಗಳಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಇಂತಹ ಗಡಿಯಾಚೆಗಿನ ದಾಳಿಗಳು ಕೆಲವೇ ಕೆಲವು ನಡೆದಿದ್ದವು.


  • ಪಾಕಿಸ್ತಾನದೊಂದಿಗೆ ನೇರ ಸಂಘರ್ಷಕ್ಕಿಳಿಯುವ ಬದಲು  ಪಾಕಿಸ್ತಾನದ ವಿರುದ್ಧ ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯನ್ನು  ಸುಧಾರಿಸಬೇಕೆಂಬುದು ಕೆಲವರ ಅಭಿಪ್ರಾಯ. ಹೀಗೆ ಮಾಡುವಲ್ಲಿ ಏನಾದರೂ ಸಮಸ್ಯೆಯಿದೆಯೇ ?

ತನ್ನ ದೇಶದೊಳಗಿನ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಹೊಣೆ ಪಾಕಿಸ್ತಾನದ್ದು. ಅವರು ಅದರಲ್ಲಿ ಯಶಸ್ವಿಯಾದರೆ ಅದು ಭಾರತದ ದೃಷ್ಟಿಯಿಂದ ಉತ್ತಮ. ಇಲ್ಲದೇ ಹೋದಲ್ಲಿ ನಮ್ಮ ಪಶ್ಚಿಮ ಗಡಿತನಕ ತಾಲಿಬಾನ್ ದೈತ್ಯರು ನುಸುಳುವ ಸಾಧ್ಯತೆಯಿದೆ. ಭಾರತದೊಂದಿಗಿನ ತನ್ನ ಪೂರ್ವ ಗಡಿಯಲ್ಲಿ ಶಾಂತಿಯಿರುವಂತೆ ನೋಡಿಕೊಳ್ಳಬೇಕಾಗಿದ್ದು ಪಾಕಿಸ್ತಾನದ ಕರ್ತವ್ಯ. ಆದರೆ ಪಾಕಿಸ್ತಾನದ ಸೇನೆ  ಭಾರತದ ವಿರುದ್ಧ  ಹೋಗಲು ಯತ್ನಿಸಿದಲ್ಲಿ ನಮಗೆ ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಾಬಲ್ಯ ಸಾಧಿಸುವುದು ಅನಿವಾರ್ಯವಾಗುತ್ತದೆ.


  • ಎರಡೂ ದೇಶಗಳ ಅಣ್ವಸ್ತ್ರ ಸಾಮಥ್ರ್ಯವನ್ನು ಗಮನದಲ್ಲಿರಿಸಿ  ಸಂಬಂಧಗಳನ್ನು ಸುಧಾರಿಸಲು  ಪಾಕಿಸ್ತಾನ ಪ್ರಯತ್ನಿಸುತ್ತಿದೆಯೇ ?

ಎರಡೂವರೆ ದಶಕಗಳ ತನಕ ಪಾಕಿಸ್ತಾನದ  ಪರೋಕ್ಷ ಯುದ್ಧ ನಡೆಸುತ್ತಿದ್ದರೂ  ತಾಳ್ಮೆಯಿಂದಿದ್ದ ಭಾರತ ಇದೀಗ ತೀವ್ರವಾಗಿ ಪ್ರತಿಕ್ರಿಯಿಸಿದೆ. ಸ್ವರಕ್ಷಣೆಗಾಗಿ ಭಾರತ ಈ ಕ್ರಮ ಕೈಗೊಂಡಿದೆ ಹಾಗೂ ಪರಿಸ್ಥಿತಿ ಬಿಗಡಾಯಿಸದಂತೆ ಮುನ್ನೆಚ್ಚರಿಕೆಯನ್ನೂ ಅದು ಕೈಗೊಂಡಿದೆ.


  • ಹಿಂದಿನ ತನ್ನ ಧೋರಣೆಗಿಂತ ಭಿನ್ನವಾಗಿ ಪಾಕಿಸ್ತಾನ ಈಗ ತನ್ನ ಕಡೆಯಲ್ಲಿ ಉಂಟಾಗುವ ಸಾವು ನೋವುಗಳ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳಲು ಆರಂಭಿಸಿದೆ. ಮೃತಪಟ್ಟ ಯೋಧರ ಮಾಹಿತಿ ಮತ್ತು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ  ಪೋಸ್ಟ್ ಮಾಡುತ್ತಿದೆ. ಪಾಕಿಸ್ತಾನದ ಈ ಬದಲಾದ ತಂತ್ರದ ಹಿಂದಿನ ಕಾರಣವೇನು ?

ಈಗ ಸಾಮಾಜಿಕ ಜಾಲತಾಣಗಳು ಅದೆಷ್ಟು ಸಕ್ರಿಯವಾಗಿವೆಯೆಂದರೆ  ಇಂತಹ ಸಾವು ನೋವುಗಳ ವಿಚಾರವನ್ನು ಮರೆಮಾಚಲು ಸಾಧ್ಯವಿಲ್ಲ. ಹೀಗೆ ಮಾಡಿ ಜನರ ಬೆಂಬಲ ಪಡೆಯಲು ಪಾಕಿಸ್ತಾನದ ಸೇನೆ ಈಗ ಯತ್ನಿಸುತ್ತಿದೆ.


  • ಕೇವಲ ಎರಡು ತಿಂಗಳುಗಳ ಅವಧಿಯಲ್ಲಿ ಸುಮಾರು 200 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿರುವಾಗ 2003ರ ಕದನ ವಿರಾಮ ಒಪ್ಪಂದದಿಂದ ಏನಾದರೂ ಪ್ರಯೋಜನವಾಗಿದೆಯೆಂದು ನಿಮಗನಿಸುತ್ತದೆಯೇ ?

ಅದೊಂದು ಅನೌಪಚಾರಿಕ ಕದನ ವಿರಾಮ ಒಪ್ಪಂದವಾಗಿತ್ತು. ಈಗ ಅದು ಸತ್ತು ಅದನ್ನು ಹೂತಂತೆಯೇ ಸರಿ.


  • ಪಾಕಿಸ್ತಾನದ ಬಳಿ ಭಾರತವನ್ನೇ ನಿರ್ದಿಷ್ಟವಾಗಿ ಗುರಿಯಾಗಿಸುವ ಅಣ್ವಸ್ತ್ರಗಳಿವೆಯೆಂದು ಹೇಳಲಾಗುತ್ತಿದೆ. ಇದನ್ನು ಭಾರತ ಹೇಗೆ  ನಿಭಾಯಿಸಬಹುದು ?

ಭಾರತದ ಸೇನಾ ಪಡೆಗಳು ಪಾಕಿಸ್ತಾನದತ್ತ ಮುನ್ನುಗ್ಗಿದರೆ ತಾನು ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರ – ಹಟ್ಫ್-9 ಎಂಬ 60 ಕಿ ಮೀ ದೂರದ ಕ್ಷಿಪಣಿ  ಉಪಯೋಗಿಸುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಭಾರತದ ವಿರುದ್ಧ ಅಣ್ವಸ್ತ್ರಗಳು ಪ್ರಯೋಗವಾದರೆ ಮಾತ್ರ ಪ್ರತಿ ದಾಳಿ ನಡೆಸುವುದು ಭಾರತದ ನೀತಿಯಾಗಿದೆ. ಒಂದು ವೇಳೆ ಪಾಕಿಸ್ತಾನ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ ಮತ್ತು ಭಾರತ ಅದಕ್ಕೆ ಪ್ರತಿ ದಾಳಿ ನಡೆಸಿದಲ್ಲಿ ಪಾಕಿಸ್ತಾನ ಒಂದು ದೇಶವಾಗಿ ಉಳಿಯುವುದಿಲ್ಲ. ಹೀಗಾಗುವುದು ಅಲ್ಲಿನ ಅಣ್ವಸ್ತ್ರಗಳ ಉಸ್ತುವಾರಿ ಹೊತ್ತಿರುವ ಜನರಲ್ಲರಿಗೆ ಬೇಕಾಗಿಲ್ಲ. ಆದುದರಿಂದ ಇಂತಹ ಶಸ್ತ್ರಾಸ್ತ್ರ ಪ್ರಯೋಗದ ಬಗ್ಗೆ ಪಾಕಿಸ್ತಾನ ಕೇವಲ ಬೊಗಳೆ ಬಿಡುತ್ತಿದೆ ಎಂದು ಹೇಳಬಹುದು.


  • ಪಾಕಿಸ್ತಾನದ ಅಣ್ವಸ್ತ್ರ ಸಾಧನಗಳ ಮೇಲೆ ಹಿಡಿತ ಸಾಧಿಸುವುದಾಗಿ ಅಲ್ ಕೈದಾ ಮತ್ತು  ಇಸ್ಲಾಮಿಕ್ ಸ್ಟೇಟ್ ಹೇಳಿಕೊಂಡಿವೆ. ಇದು ಎಷ್ಟರಮಟ್ಟಿಗೆ ನಿಜ ?

ಪಾಕಿಸ್ತಾನದ ಬಳಿಯಿರುವ ಅಣ್ವಸ್ತ್ರಗಳು  ಅದರ ಸೇನೆಯ ಹಿಡಿತದಲ್ಲಿರುವಷ್ಟು ಕಾಲ  ಅವುಗಳು ಇಸ್ಲಾಮಿಕ್ ಸ್ಟೇಟ್ ಯಾ ಬೇರ್ಯಾವುದೇ ಜಿಹಾದಿ ಗುಂಪುಗಳ ಕೈಗೆ ಹೋಗುವುದು ಕಷ್ಟಸಾಧ್ಯ. ಅಣ್ವಸ್ತ್ರ ಶೇಖರಣಾ ಘಟಕಗಳಲ್ಲಿ ಮೂರು ಹಂತದ ಸುರಕ್ಷಾ ವ್ಯವಸ್ಥೆಯಿರುತ್ತದೆ. ಆದರೆ ಸೇನೆಯಲ್ಲಿ ಕ್ಷಿಪ್ರಕ್ರಾಂತಿಯೇನಾದರೂ ಆದಲ್ಲಿ ಮಾತ್ರ ಅಣ್ವಸ್ತ್ರಗಳು ಜಿಹಾದಿಗಳ ಕೈಗೆ  ಹೋಗುವ ಸಾಧ್ಯತೆಯಿದೆ.


ಕೃಪೆ : ಡೆಕ್ಕನ್ ಕ್ರಾನಿಕಲ್