‘ಪಾಕಿಸ್ತಾನದಲ್ಲಿ ಧರ್ಮನಿಂದೆಯ ಆರೋಪಗಳಿಗೆ ತುತ್ತಾಗುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರು’

ಆಮ್ನೆಸ್ಟಿ ವರದಿ

ನವದೆಹಲಿ :  ಆಮ್ನೆಸ್ಟಿ ಇಂಟರನ್ಯಾಷನಲ್ ಇತ್ತೀಚೆಗೆ ಬಿಡುಗಡೆಗೊಳಿಸಿದ ವರದಿಯೊಂದರ ಪ್ರಕಾರ  ಪಾಕಿಸ್ತಾನದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರು  ಬಹಳಷ್ಟು ಬಾರಿ ಧರ್ಮನಿಂದೆಯ ಸುಳ್ಳು ಆರೋಪಗಳಿಗೆ ತುತ್ತಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿರುವ ಕ್ರೈಸ್ತರ ಪಾಡು ಹಾಗೂ  ಹಿಂದೂಗಳು ಮತ್ತಿತರ ಧಾರ್ಮಿಕ ಅಲ್ಪಸಂಖ್ಯಾತರು  ಧರ್ಮನಿಂದೆ ಸಂಬಂಧಿತ ಕಾನೂನುಗಳಿಗೆ ಬಲಿಪಶುಗಳಾದ  ಬಗ್ಗೆ ಈ ವರದಿ ಬೆಳಕು ಚೆಲ್ಲಿದೆ.

`ಪಾಕಿಸ್ತಾನ್ : ಆ್ಯಸ್ ಗುಡ್ ಆ್ಯಸ್ ಡೆಡ್ ; ದಿ ಇಂಪಾಕ್ಟ್ ಆಫ್ ದಿ ಬ್ಲಾಸ್ಫೆಮಿ ಲಾಸ್ ಇನ್ ಪಾಕಿಸ್ತಾನ್’  ಎಂಬ ಈ ವರದಿಯಲ್ಲಿ ಆ ದೇಶದಲ್ಲಿನ ವಿವಾದಿತ ಧರ್ಮನಿಂದೆಗೆ ಸಂಬಂಧಿಸಿದ ಕಾನೂನುಗಳು “ನೈತಿಕ ಪೊಲೀಸರನ್ನು ಹುರಿದುಂಬಿಸಿದೆ” ಹಾಗೂ ಅವರು  ಧರ್ಮನಿಂದೆಯ ಅಪವಾದವನ್ನು ಹೊತ್ತವರನ್ನು ಬೆದರಿಸಲು, ಹಿಂಸಿಸಲು ಹಾಗೂ ಕೊಲ್ಲಲೂ ಹೇಸುವುದಿಲ್ಲವೆಂದು ತಿಳಿಸಿದೆ.

ಪಾಕಿಸ್ತಾನದಲ್ಲಿ ಜಾರಿಯಲ್ಲಿರುವ ಧರ್ಮನಿಂದೆಗೆ ಸಂಬಂಧಿಸಿದ ಕಾನೂನುಗಳು ಹೇಗೆ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತವೆ, ಇದು  ಸರಕಾರದಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯೇ ಅಥವಾ ಪ್ರಭಾವಶಾಲಿ ಶಕ್ತಿಗಳು ನಡೆಸುವ ದೌರ್ಜನ್ಯವೇ ಎಂಬುದರ ಬಗ್ಗೆ ಕೂಡ ಆಮ್ನೆಸ್ಟಿ ವರದಿ ಉಲ್ಲೇಖಿಸಿದೆ.

ಈ ಕಾನೂನುಗಳು ಮಾನವ ಹಕ್ಕುಗಳನ್ನು  ಸಂರಕ್ಷಿಸಲು ಪ್ರಯತ್ನಿಸುತ್ತಿಲ್ಲ ಹಾಗೂ  ಇದರಿಂದಾಗಿ ಮತ್ತಷ್ಟು ದೌರ್ಜನ್ಯ ನಡೆಯದಂತೆ  ತಡೆಯುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

“ಸೀಮಿತ ಅಂಕಿಅಂಶ ಲಭ್ಯವಿರುವುದರಿಂದ ಧರ್ಮನಿಂದೆಯ ಸಂಬಂಧ ಎಷ್ಟು ಪ್ರಕರಣಗಳು ದಾಖಲಾಗಿರಬಹುದೆಂಬ ನಿಖರ ಮಾಹಿತಿ ಪಡೆಯುವುದು ಕಷ್ಟ. ಆದರೆ ನ್ಯಾಷನಲ್ ಕಮಿಷನ್ ಫಾರ್ ಜಸ್ಟಿಸ್ ಎಂಡ್ ಪೀಸ್ ಹಾಗೂ ಹ್ಯೂಮನ್ ರೈಟ್ಸ್ ಕಮಿಷನ್ ಆಫ್ ಪಾಕಿಸ್ತಾನ ನೀಡಿದ ಮಾಹಿತಿಯ ಪ್ರಕಾರ 1980ರ ನಂತರ ಇಂತಹ ಪ್ರಕರಣಗಳು ಬಹಳಷ್ಟು ಹೆಚ್ಚಾಗಿವೆ.  ನ್ಯಾಷನಲ್ ಕಮಿಷನ್ ಪ್ರಕಾರ  1987ರ ತರುವಾಯ ಒಟ್ಟು 633 ಮುಸ್ಲಿಮರು, 494 ಅಹಮದಿಗಳು, 187 ಕ್ರೈಸ್ತರು ಹಾಗೂ 21 ಹಿಂದುಗಳ ವಿರುದ್ಧ ಧರ್ಮಕ್ಕೆ ಸಂಬಂಧಿಸಿದ  ಅಪರಾಧ ಆರೋಪಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಆಮ್ನೆಸ್ಟಿ ತನ್ನ ವರದಿಯಲ್ಲಿ ತಿಳಿಸಿದೆ.