ಠಕ್ಕ ಬುದ್ಧಿಯ ಪಾಕಿಗೆ ನಿರ್ದಿಷ್ಟ ದಾಳಿ ಮೂಲಕ ಪ್ರತ್ಯುತ್ತರ ನೀಡಬೇಕಾಗಿದೆ

ನಿರ್ದಿಷ್ಟ ದಾಳಿ ಬಳಿಕವೂ ಪಾಕಿಸ್ತಾನ ಪಾಠ ಕಲಿತಿಲ್ಲ ಎನ್ನುವುದು ಮೇಲಿಂದ ಮೇಲೆ ಸಾಬೀತಾಗುತ್ತಲೇ ಇದೆ. ಕಳೆದ ಬುಧವಾರ ಪಾಕ್ ಉಗ್ರರು ಭಾರತೀಯ ಯುವ ಸೇನಾಧಿಕಾರಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಕೃತ್ಯ ಖಂಡಿಸಲು ಪದಗಳಿಲ್ಲ.
ಕುಲಭೂಷಣ ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗ ಅನುಭವಿಸಿದ ಮಾರನೇ ದಿನವೇ ಈ ಘಟನೆ ನಡೆದಿರುವುದು ಕಾಕತಾಳೀಯ ಎಂದು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಉಗ್ರರನ್ನು ಸಲಹುತ್ತಿರುವುದು ಪಾಕಿಸ್ತಾನದ ಸೇನೆ ಎನ್ನುವುದು ಇಡೀ ಜಗತ್ತಿಗೇ ಗೊತ್ತಿರುವ ಸಂಗತಿ. ಭಾರತದ ವಿರುದ್ಧ ನೇರ ಸಂಗ್ರಾಮಕ್ಕೆ ಹೋದರೆ ನಾಮಾವಶೇಷವಾಗುವುದು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ನೆರೆ ರಾಷ್ಟ್ರವು, ಉಗ್ರರ ಮೂಲಕ ಪರೋಕ್ಷ ಸಮರ ನಡೆಸುತ್ತಿದೆ.
ನಿರ್ದಿಷ್ಟ ದಾಳಿ ಮೂಲಕ ಮೋದಿ ಸರಕಾರ ತೀವ್ರ ಎಚ್ಚರಿಕೆ ನೀಡಿದ್ದರೂ ಪಾಕ್ ಸೇನೆ ಮತ್ತು ಸೇನಾ ಪ್ರಾಯೋಜಿತ ಉಗ್ರರ ಪುಂಡಾಟ ಮುಂದುವರೆದಿದೆ. ಭಾರತೀಯ ಯೋಧರ ಶಿರಚ್ಛೇದನದ ಬೆನ್ನಲ್ಲೇ ಯುವ ಸೇನಾಧಿಕಾರಿಯ ಹತ್ಯೆ ನಡೆದಿದೆ. ಠಕ್ಕ ಬುದ್ಧಿ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಕ್ರಮಗಳ ಮೂಲಕ ಪಾಠ ಕಲಿಸುವ ಕಾಲ ಮಿಂಚಿ ಹೋಗಿದೆ. ಮಿಗಿಲಾಗಿ ಅಂತಹ ಕ್ರಮಗಳಿಂದ ತಪ್ಪು ತಿದ್ದಿಕೊಳ್ಳುವ ಮನೋಭಾವವೂ ಆ ರಾಷ್ಟ್ರಕ್ಕೆ ಇಲ್ಲ. ಹೀಗಾಗಿ ಕೇಂದ್ರ ಸರಕಾರ ಮತ್ತೊಂದು ನಿರ್ದಿಷ್ಟ ದಾಳಿ ಮೂಲಕ ತಕ್ಕ ಪ್ರತ್ಯುತ್ತರ ನೀಡಬೇಕು. ಅದು ಪ್ರತಿ ಭಾರತೀಯನ ಹೆಬ್ಬಯಕೆಯೂ ಆಗಿದೆ

  • ಕೆ ಪ್ರಶಾಂತ್ ಸುವರ್ಣ, ವಾಮಂಜೂರು