ಇಸ್ಲಾಮಿಕ್ ಜಗತ್ತಿನಲ್ಲಿ ಪಾಕಿಸ್ತಾನಕ್ಕೆ ಸಣ್ಣ ಪಾತ್ರವೂ ಇಲ್ಲ

ತನ್ನ ಭಾರತೀಯ ಹಿನ್ನೆಲೆಯನ್ನು ಮರೆಮಾಚಲು ಸದಾ ಯತ್ನಿಸುತ್ತಿರುವ ಪಾಕ್

ಪಾಕಿಸ್ತಾನೀಯರನ್ನು ಅರಬ್ ದೇಶದಲ್ಲಿ ಕೆಟ್ಟದ್ದಾಗಿ ನಡೆಸಿಕೊಳ್ಳಲಾಗುತ್ತಿದೆ

  • ಚೇತನ್ ರತನ್ / ಅಲಿ ನಸೀರ್

ತನ್ನ ಭಾರತೀಯ ಹಿನ್ನೆಲೆಯನ್ನು ಕಳಚಿಕೊಳ್ಳುವ ಸಲುವಾಗಿ ಪಾಕಿಸ್ತಾನಿ ನಾಯಕತ್ವ ಹಲವು ಕಾರ್ಯಕ್ರಮಗಳನ್ನು 1947ರಿಂದ ಹಾಕಿಕೊಂಡು ಬಂದಿದೆ. ಇದರಂಗವಾಗಿ  ಇತಿಹಾಸವನ್ನು ತಿರುಚಿ ಹಿಂದೂ ಮತ್ತು ಬೌದ್ಧ ಹಿನ್ನೆಲೆಯನ್ನು ಹೊರತುಪಡಿಸಿ ಅವರ ಇತಿಹಾಸವನ್ನು ಕ್ರಿಸ್ತಶಕ 712ರ  ಮೊಹಮ್ಮದ್ ಖಾಸಿಮ್ ಆಕ್ರಮಣದಿಂದ ಆರಂಭಿಸಲಾಗಿದೆ.

ನಂತರ ತಮ್ಮ ಜನಾಂಗೀಯತೆಯನ್ನು ವಿವರಿಸುವ ಸಲುವಾಗಿ ಭಾರತೀಯರನ್ನು ಹೊರತುಪಡಿಸಿ ಅರಬ್ಬರು, ಇರಾನೀಯರು, ಅಫ್ಘಾನರು ಹಾಗೂ ಮಧ್ಯ ಏಷ್ಯಾದ ಆದಿವಾಸಿಗಳು ತಮ್ಮ ಪೂರ್ವಜರು ಎಂದು ಹೇಳಿಕೊಂಡರು. ಕಾರ್ಯನಿರ್ವಹಿಸದೇ ಇರುವ ಟರ್ಕಿಶ್ ಕಲೀಫೇಟಿನಿಂದ ಎರವಲು ಪಡೆದ ಮುಸ್ಲಿಂ ಉಮ್ಮಾಹ್ ಎಂಬ  ಪರಿಕಲ್ಪನೆಯನ್ನು ಅವರು ಹರಿಯಬಿಟ್ಟರು. “ಮುಸ್ಲಿಂ ಜಗತ್ತು ಪಾಕಿಸ್ತಾನವನ್ನು ಅವಲಂಬಿಸಿದೆ ; ನಾಯಕತ್ವಕ್ಕಾಗಿ ಹಾಗೂ ಮುಸ್ಲಿಂ  ಜಗತ್ತು ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಅದರತ್ತ ನೋಡುತ್ತಿದೆ” ಎಂಬ ಭಾವನೆ ಮೂಡಿಸುವ ಸಲುವಾಗಿ ಪಾಕಿಸ್ತಾನದ ಆಡಳಿತ ಹಾಗೂ ಮಾಧ್ಯಮ ಯತ್ನಿಸುತ್ತಿದೆ.

ಆದರೆ ಯಾವುದೇ ಇಸ್ಲಾಮಿಕ್ ದೇಶ ಯಾ ಅರಬ್ ದೇಶಗಳು ಉಮ್ಮಾಹ್ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ, ಪಾಕಿಸ್ತಾನಕ್ಕೆ ನಾಯಕತ್ವ ನೀಡಲು ಮನಸ್ಸು ಮಾಡಿಲ್ಲ ಹಾಗೂ ಇಸ್ಲಾಮಿಕ್ ಜಗತ್ತು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಯಾರೂ ಪಾಕಿಸ್ತಾನದತ್ತ ನೋಡುತ್ತಿಲ್ಲವೆಂಬುದು ವಾಸ್ತವ.

ನಿಜ ಹೇಳಬೇಕೆಂದರೆ, ಇಸ್ಲಾಮಿಕ್ ಜಗತ್ತಿನಲ್ಲಿ ಪಾಕಿಸ್ತಾನಕ್ಕೆ ಒಂದು ಸಣ್ಣ ಪಾತ್ರವೂ ಇಲ್ಲ. ಪಾಕಿಸ್ತಾನದ ಖ್ಯಾತ ಅಂಕಣಕಾರರಾಗಿರುವ ಹಸನ್ ನಿಸಾರ್ ಅವರು ಒಂದು ಕಡೆ  ವಿವರಿಸಿದ ಒಂದು ಸಂಗತಿಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. “ಒಮ್ಮೆ  ಸೌದಿ ಅರೇಬಿಯಾದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಒಬ್ಬ ಪಾಕಿಸ್ತಾನಿ, ನಾವು (ಮುಸ್ಲಿಮರು) ಸ್ಪೇನ್ ದೇಶವನ್ನು  ಆಕ್ರಮಣ ಮಾಡಿ ಆಳಿದ್ದೇವೆ ಎಂದು ಹೇಳಿದಾಗ ಒಬ್ಬ ಅರಬ್ ಆತನಲ್ಲಿ ಬಹಿರಂಗವಾಗಿ “ನೀವು ಯಾವಾಗ ಸ್ಪೇನ್ ಮೇಲೆ ಆಕ್ರಮಣ ನಡೆಸಿದ್ದು ? ಹಾಗೆ ಮಾಡಿದ್ದು ನಾವು ಎಂದು ಹೇಳಿದ್ದ. ಸಮ್ಮೇಳನದುದ್ದಕ್ಕೂ   ಈ ವ್ಯಕ್ತಿ ಪಾಕಿಸ್ತಾನೀಯರಲ್ಲಿ  ಇದೇ ಪ್ರಶ್ನೆಯನ್ನೆತ್ತಿದ್ದ.”

ಪಾಕಿಸ್ತಾನೀಯರನ್ನು ಅರಬ್ ದೇಶದಲ್ಲಿ ಕೆಟ್ಟದ್ದಾಗಿ ನಡೆಸಿಕೊಳ್ಳಲಾಗುತ್ತಿದೆ ಹಾಗೂ ಅಲ್ಲಿ ಅವರಿಗೆ  ಅವರು ಬಯಸಿದಷ್ಟು ಸಮಾನತೆಯಿಲ್ಲ.  ಪಾಶ್ಚಿಮಾತ್ಯ ದೇಶಗಳಲ್ಲಿರುವ  ಹಾಗೂ ಮಧ್ಯಪೂರ್ವ ದೇಶದಲ್ಲಿರುವ ಪಾಕಿಸ್ತಾನಿ ವಲಸಿಗರ ನಡುವೆ ಹೋಲಿಕೆ ಮಾಡಿದ ಹಸನ್ ನಿಸಾರ್,  “ಅರಬ್ ನಾಗರಿಕರಲ್ಲಿ ಯಾರೂ ಕೂಡ ಪಾಕಿಸ್ತಾನೀಯರನ್ನು ಸಮಾನವಾಗಿ ಕಾಣುವುದಿಲ್ಲ. ಅಲ್ಲದೆ  ಅವರಿಗೆ ಸ್ವತಂತ್ರ ಖಾತೆ, ಉದ್ಯಮ ತೆರೆಯಲು  ಅವಕಾಶವಿಲ್ಲ ಹಾಗೂ ಅಲ್ಲಿನ ನಾಗರಿಕತೆ ಪಡೆಯಲು ಯಾ ಅರಬ್ ಮಹಿಳೆಯನ್ನು ವಿವಾಹವಾಗಲು ಸಾಧ್ಯವಿಲ್ಲ” ಎಂದಿದ್ದಾರೆ.

ಅರಬ್ ಜಗತ್ತಿನಲ್ಲಿ ಭಾರತೀಯರಿಗಿರುವ ಗೌರವದ ಬಗ್ಗೆ ಪಾಕಿಸ್ತಾನದ ಮಾಧ್ಯಮ ಯಾವತ್ತೂ ಚರ್ಚೆ ನಡೆಸದು. ಹಾಗೆ ಮಾಡಿದಲ್ಲಿ  ಉಮ್ಮಾಹ್ ಎಂಬ ಗಾಜಿನರಮನೆಯು ಒಡೆದು ಚೂರಾಗುವುದೆಂದು ಅದಕ್ಕೆ ಚೆನ್ನಾಗಿ ತಿಳಿದಿದೆ.

ಭಾರತೀಯರು ಹಾಗೂ ಪಾಕಿಸ್ತಾನೀಯರ ಬಗ್ಗೆ ಸೌದಿ ಅರೇಬಿಯಾ ತಳೆದಿರುವ ನಿಲುವುಗಳು ಅಲ್ಲಿನ ಪ್ರಸ್ತುತ ಸನ್ನಿವೇಶದಲ್ಲಿ ಕೂಡ ಸ್ಪಷ್ಟವಾಗಿದೆ. ಭಾರತ ಸರಕಾರದ ಮಧ್ಯ ಪ್ರವೇಶದಿಂದ  ಅಲ್ಲಿನ ಸರಕಾರ ಭಾರತೀಯ  ಕಾರ್ಮಿಕರಿಗೆ  ನಿಧಿಯೊಂದನ್ನು ಸ್ಥಾಪಿಸಿ ವೇತನ ದೊರೆಯದ ಅವರಿಗೆ ಅವರ ಬಾಕಿ  ಮೊತ್ತಗಳು ದೊರೆಯುವಲ್ಲಿ ಸಹಾಯ ಮಾಡಿದೆಯಲ್ಲದೆ ಉದ್ಯೋಗ ಬದಲಾಯಿಸಲು ಅಥವಾ ಭಾರತಕ್ಕೆ ಮರಳಲು ಕೂಡ ಸಹಾಯವೊದಗಿಸಿದೆ.

ಆದರೆ ಇಂತಹುದೇ ಸಮಸ್ಯೆಯೆದುರಿಸುತ್ತಿರುವ ಸುಮಾರು 10,000 ಪಾಕಿಸ್ತಾನಿ ವಲಸಿಗರ ವಿಚಾರದಲ್ಲಿ ಯಾವುದೇ ಸಹಾಯ ನೀಡಲಾಗಿಲ್ಲ. ಪಾಕಿಸ್ತಾನೀಯರನ್ನು ಅರಬ್ ರಾಷ್ಟ್ರಗಳಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆ.


ಪಾಕ್ ಯುವಜನತೆ ಭಾರತ ಬಗ್ಗೆ ಏನು ಭಾವಿಸಿದೆ ?

ಮಹತ್ವದ ಆರ್ಥಿಕ ಪ್ರಗತಿ ಸಾಧಿಸಿರುವ ಭಾರತ ತನ್ನ ಹೆಜ್ಜೆಗುರುತುಗಳನ್ನು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೂಡಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆಯೆಂಬುದರ ಅರಿವು ಪಾಕ್ ಯುವಜನತೆಗಿದೆ. ವಿಶ್ವದ ಅತ್ಯಂತ  ದೊಡ್ಡ ಶಸ್ತ್ರಾಸ್ತ್ರ  ಆಮದುದಾರ ದೇಶ ಭಾರತವೆಂಬುದೂ ಅವರಿಗೆ ತಿಳಿದಿದೆ. ಭಾರತದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ನಿರೀಕ್ಷೆಗಳ ¨ಗ್ಗೆಯೂ ಅಲ್ಲಿನ ಯುವಜನತೆ ಮಾತನಾಡುತ್ತಿದೆ.

ಪಾಕಿಸ್ತಾನದಲ್ಲಿರುವಂತೆ ಭಾರತದಲ್ಲಿಯೂ ಯುವಜನತೆ ಜನಸಂಖ್ಯೆಯ ಹೆಚ್ಚಿನ ಭಾಗವಾಗಿದ್ದಾರೆ ಹಾಗೂ ಭಾರತದ ಐಟಿ ಉದ್ಯಮ ಹಾಗೂ ಐಟಿ ಸಂಸ್ಥೆಗಳು ವಿಶ್ವ ಮಟ್ಟದ್ದಾಗಿದೆ ಎಂದು ತಿಳಿದಿರುವ ಪಾಕ್ ಯುವಜನತೆ ಭಾರತದ  ವೈವಿಧ್ಯತೆಯ ಬಗ್ಗೆ ಹಾಗೂ ಅದು ವಿವಿಧ ಭಾಷೆ, ಸಂಸ್ಕøತಿ ಹಾಗೂ ಜೀವನ ಶೈಲಿಯ ಸಮಾಗಮವೆಂಬ ಬಗ್ಗೆಯೂ ಅರಿತಿದೆ.

ಭಾರತ ತನ್ನೊಡಲಲ್ಲಿರುವ ಹಲವು ಸಮಸ್ಯೆಗಳ ಹೊರತಾಗಿಯೂ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನೀಡುತ್ತಿರುವ ಮನ್ನಣೆ ಅಲ್ಲಿನ ಸ್ವಾಯತ್ತ ಸುಪ್ರೀಂ ಕೋರ್ಟ್, ರಾಜಕೀಯದಿಂದ ದೂರವೇ ಉಳಿದಿರುವ ಹಾಗೂ ಸರಕಾರದ ನೇರ ನಿಯಂತ್ರಣದಲ್ಲಿರುವ ಅಲ್ಲಿನ  ರಕ್ಷಣಾ ಪಡೆಗಳ ಬಗ್ಗೆಯೂ ಪಾಕ್ ಯುವಜನತೆ ಚೆನ್ನಾಗಿ ತಿಳಿದಿದೆಯಲ್ಲದೆ ಭಾರತದ ಎಲ್ಲಾ ಆಗುಹೋಗುಗಳ ಬಗ್ಗೆಯೂ  ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಭಾರತ ಇಂದಿಗೂ, ಮುಂದೆಯೂ ಚೆನ್ನಾಗಿ ಪ್ರಗತಿ ಸಾಧಿಸಲಿ ಎಂದು ಅವರು ಬಯಸುತ್ತಿದ್ದಾರೆ.