ಭಾರತದ ವಿರುದ್ಧ ವಿಶ್ವಸಂಸ್ಥೆಗೆ ಪಾಕಿಸ್ತಾನದ ಆರೋಪ ಪಟ್ಟಿ

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಭಾರತ “ಹಸ್ತಕ್ಷೇಪ ಮತ್ತು ಭಯೋತ್ಪಾದನೆ” ನಡೆಸುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಅದಕ್ಕೆ ಸಂಬಂಧಿಸಿದ ಸಾಕ್ಷ್ಯಿ-ಪುರಾವೆಯನ್ನು (ದಾಖಲೆ) ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೀಸ್ ಅವರಿಗೆ ಹಸ್ತಾಂತರಿಸಿದೆ ಎಂದು ಸುದ್ದಿಸಂಸ್ಥೆಯೊಂದು ಹೇಳಿದೆ.

ಭಾರತದ ವಿರುದ್ಧ ದಾಖಲೆಗಳ ಜೊತೆಗೆ ಪಾಕ್ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಝ್ ಅಝಿಝ್ ನೀಡಿರುವ ಪತ್ರವೊಂದನ್ನೂ ವಿಶ್ವಸಂಸ್ಥೆಯಲ್ಲಿ ಪಾಕ್ ರಾಯಭಾರಿ ಮಲೀಹ ಲೋಧಿ ಸಲ್ಲಿಸಿದ್ದಾರೆ.

ಪಾಕಿನಲ್ಲಿ ಭಾರತದ ಹಸ್ತಕ್ಷೇಪ ಕುರಿತು ಹೆಚ್ಚುವರಿ ಮಾಹಿತಿ ಹಾಗೂ ಒಕ್ಕೂಟ ಆಡಳಿತದ ಬುಡಕಟ್ಟು ಪ್ರದೇಶವಾದ ಬಲೂಚಿಸ್ತಾನ ಮತ್ತು ಕರಾಚಿಯಲ್ಲಿ ನಡೆದ ಭಯೋತ್ಪಾದನೆಯಲ್ಲಿ ಭಾರತದ ಶಾಮೀಲಾತಿ ಸಾಕ್ಷ್ಯಿಗಳು ಈ ದಾಖಲೆಯಲ್ಲಿ ಒಳಗೊಂಡಿವೆ ಎಂದು ಇಸ್ಲಾಮಾಬಾದ್ ವಿದೇಶ ಕಚೇರಿ ಹೇಳಿದೆ.

ಕಳೆದ ವರ್ಷ ನವಂಬರ್ 18ರಂದು ಭಾರತದ ಜಲಂತರ್ಗಾಮಿಯೊಂದು ಜಲ ಗಡಿ ಉಲ್ಲಂಘಿಸಲು ಪ್ರಯತ್ನಿಸಿದ ವೀಡಿಯೋ ಸಾಕ್ಷ್ಯಿಯೂ ಆ ವರದಿಯಲ್ಲಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಕಳೆದ ವರ್ಷ ಮಾರ್ಚಿಯಲ್ಲಿ ಬಲೂಚಿಸ್ತಾನದಲ್ಲಿ ಬಂಧಿಸಲ್ಪಟ್ಟಿರುವ ಸಂಶೋಧನೆ ಮತ್ತು ವಿಶ್ಲೇಷಣೆ ಘಟಕದ ಏಜೆಂಟ್ ಕುಲಭೂಷಣ ಜಾಧವ್ ತಪ್ಪೊಪ್ಪಿಕೊಂಡಿರುವ ಹೇಳಿಕೆ ಅಜೀಝ್ ಪತ್ರದಲ್ಲಿ ಉಲ್ಲೇಖಗೊಂಡಿದೆ.

ಬಲೂಚಿಸ್ತಾನದಲ್ಲಿ ಅಶಾಂತಿ ಸೃಷ್ಟಿಸಲು ಉತ್ತೇಜನ ನೀಡುವುದೇ ಭಾರತದ ಗುಪಚರ ಸಂಸ್ಥೆ `ರಾ’ ಕೆಲಸವಾಗಿದೆ. ಆದರೆ ಇದನ್ನು ಭಾರತ ಪ್ರತಿ ಬಾರಿಯೂ ನಿರಾಕರಿಸುತ್ತ ಬಂದಿತ್ತು. ಪಾಕ್ ವಿಷಯದಲ್ಲಿ ಭಾರತ ನಡೆಸುತ್ತಿರುವ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಚಟುವಟಿಕೆಯನ್ನು ವಿಶ್ವಸಂಸ್ಥೆ ನಿಲ್ಲಿಸಬೇಕು ಎಂದು ಅಝೀಝ್ ತನ್ನ ಪತ್ರದಲ್ಲಿ ಆಗ್ರಹಿಸಿದ್ದಾರೆ. ಇಂತಹ ಚಟುವಟಿಕೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭೀತಿದಾಯಕವೆಂದು ಪಾಕ್ ಹೇಳಿದೆ. ವಿಶ್ವಸಂಸ್ಥೆಗೆ ಪಾಕಿಸ್ತಾನ ನಾಲ್ಕನೇ ಬಾರಿ ಇಂತಹ ದಾಖಲೆ ಒದಗಿಸುತ್ತಿದೆ.