ಪಡುಪಣಂಬೂರು ಮಾಜಿ ಅಧ್ಯಕ್ಷ ಪಂ ಸದಸ್ಯತ್ವಕ್ಕೆ ರಾಜೀನಾಮೆ

ಬಿಜೆಪಿ ಭಿನ್ನಮತ ಸ್ಫೋಟ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಪಡುಪಣಂಬೂರು ಪಂಚಾಯತಿ ಮಾಜಿ ಅಧ್ಯಕ್ಷ ಬಿಜೆಪಿಯ ವಿನೋದ್ ಸಾಲ್ಯಾನ್ ಪಂಚಾಯತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಸ್ವತಃ ವಿನೋದ್ ಸಾಲ್ಯಾನ್ ದೃಢೀಕರಿಸಿದ್ದಾರೆ.

ರಾಜೀನಾಮೆಯಿಂದಾಗಿ ಪಡುಪಣಂಬೂರು ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಬಯಲಿಗೆ ಬಂದಿದೆ. ಕಳೆದ ಪಂಚಾಯತಿ ಚುನಾವಣೆ ಬಳಿಕ ಪಡುಪಣಂಬೂರಿನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರ ಉಳಿಸಿಕೊಳ್ಳಲು ವಿನೋದ್ ಸಾಲ್ಯಾನ್ ಕಾರಣಕರ್ತರಾಗಿದ್ದರು. ಆದರೆ ಅವರಿಗೆ ಅಧ್ಯಕ್ಷ ಪಟ್ಟ ತಪ್ಪಿಸಲಾಗಿತ್ತು. ಆ ಬಳಿಕ ಪಡುಪಣಂಬೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡು ಪಂಚಾಯತಿ ಅಧ್ಯಕ್ಷರಿಗೆ ಹಾಗೂ ವಿನೋದ್ ಸಾಲ್ಯಾನ್ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿತ್ತು.

ಆಡಳಿತದಲ್ಲಿ ಅನನುಭವಿಯಾಗಿರುವ ಈಗಿನ ಅಧ್ಯಕ್ಷರು ಅಧಿಕಾರದಲ್ಲಿ ಎಡವಿದಾಗ ಪಂಚಾಯತಿಯ ನಾಗರಿಕರು ಕಾಮಗಾರಿಯ ಪ್ರತಿಯೊಂದು ವಿಷಯದಲ್ಲಿ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನರನ್ನು ಅವಲಂಬಿಸಿರುವುದು ಈಗಿನ

ಅಧ್ಯಕ್ಷರಿಗೆ ನಂಗಲಾರದ ತುತ್ತಾಗಿ ಪರಿಣಮಿಸಿತ್ತು. ಕೆಲ ದಿನಗಳ ಹಿಂದೆ ಪಡುಪಣಂಬೂರಿನಲ್ಲಿ ಹೆದ್ದಾರಿ ಡಿವೈಡರ್ ಅಳವಡಿಸುವ ಬಗ್ಗೆ ಇಬ್ಬರ ನಡುವೆ ಮುಸುಕಿನ ಗುದ್ದಾಟ ತೀವ್ರಗೊಂಡು ಮಾಜಿ ಅಧ್ಯಕ್ಷರ ಕೈಮೇಲಾಗಿತ್ತು. ಇಬ್ಬರ ಕಚ್ಚಾಟದಿಂದ ಪಡುಪಣಂಬೂರು ಬಿಜೆಪಿಯಲ್ಲಿ ಭಿನ್ನಮತದಿಂದ ಬೇಸತ್ತು ಪಂಚಾಯತಿ ಸದಸ್ಯತ್ವಕ್ಕೆ ರಾಜೀನಾಮೆಯನ್ನು ರಿಜಿಸ್ಟರ್ ಮೂಲಕ ರವಾನಿಸಿದ್ದಾರೆ.

ಕೇವಲ ಪಂಚಾಯತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ವಿನಹ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಗೊಂದಲದಲ್ಲಿದ್ದಾರೆ ಎಂದು ತಿಳಿದುಬಂದಿದೆ.