ಪೊದೆಗಳಲ್ಲಿ ಅಡಗಿದೆ ಪಡುಬಿದ್ರಿ ಪೊಲೀಸ್ ವಸತಿಗೃಹ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಂಚಿನಡ್ಕದಲ್ಲಿರುವ ಹುಟ್ಟಿನಲ್ಲಿ ಸುಣ್ಣಬಣ್ಣ ಕಂಡ ಪೊಲೀಸ್ ವಸತಿಗೃಹ ಇದೀಗ ನಿರ್ವಹಣೆ ಇಲ್ಲದೆ ಮುಳ್ಳು ಪೊದೆಗಳಲ್ಲಿ ಅಡಗಿ ಹೋಗಿದ್ದಲ್ಲದೆ, ಆ ವಸತಿಗೃಹದಲ್ಲಿ ವಾಸವಿರುವ ಪೊಲೀಸ್ ಕುಟುಂಬಗಳು ಎಸೆಯುವ ತ್ಯಾಜ್ಯ ಕೊಳೆತು ನಾರುತ್ತಿದ್ದು, ಇದು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಬೆಳೆಯುತ್ತಿದೆ.

22pdb2

ಕಂಚಿನಡ್ಕ ಪ್ರದೇಶದ ತ್ಯಾಜ್ಯ ಸಮಸ್ಯೆಯ ಬಗ್ಗೆ `ಕರಾವಳಿ ಅಲೆ’ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಪಡುಬಿದ್ರಿ ಗ್ರಾ ಪಂ ಅಧ್ಯಕ್ಷರು, ಪಿಡಿಒ ಸಹಿತ ಸ್ಥಳೀಯ ಗ್ರಾ ಪಂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂದರ್ಭ ಮಾತನಾಡಿದ ಪಿಡಿಒ ಪಂಚಾಕ್ಷರೀ ಸ್ವಾಮಿ, “ಈ ಭಾಗದ ತ್ಯಾಜ್ಯ ಸಮಸ್ಯೆಯ ತೀವ್ರತೆ ಗಮನಕ್ಕೆ ಬಂದಿದೆ. ತಕ್ಷಣವೇ ಇಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ ಆ ಭಾಗದಲ್ಲಿ ಕಸದ ತೊಟ್ಟಿ ಅಳವಡಿಸಲಾಗುವುದು. ತೊಟ್ಟಿಯಲ್ಲಿ ಶೇಖರಣೆಯಾದ ತ್ಯಾಜ್ಯಗಳನ್ನು ಕಾಲಕಾಲಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ವಿಲೇವಾರಿ ನಡೆಸಲಾಗುವುದು” ಎಂದರು.

ಗ್ರಾ ಪಂ ಅಧ್ಯಕ್ಷೆ ದಮಯಂತಿ ಅಮೀನ್ ಮಾತನಾಡಿ, “ಮತ ಹಾಕಿ ನಮ್ಮನ್ನು ಗೆಲ್ಲಿಸಿದ ಮಾತ್ರಕ್ಕೆ ಗ್ರಾಮದಲ್ಲಿ ನಡೆಯುವ ಎಲ್ಲಾ ಸಮಸ್ಯೆಗಳಿಗೂ ನಾವೇ ಹೊಣೆ ಎಂಬಂತೆ ಜನ ವರ್ತಿಸುತ್ತಾರೆ. ಆದರೆ ಕೇವಲ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಮಾತ್ರ ಸಾಲದು. ಗ್ರಾಮಸ್ಥರು ನಮ್ಮೊಂದಿಗೆ ಸೇರಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿದಾಗ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ. ಇದೀಗ ಕಂಚಿನಡ್ಕ ಪ್ರದೇಶದಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ವಾಸಿಸುವ ಪೊಲೀಸ್ ಕುಟುಂಬಗಳು ತಮ್ಮ ವಾಸ ಸ್ಥಳದ ಪಕ್ಕವನ್ನು ತ್ಯಾಜ್ಯಗುಂಡಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿರುವ ಪೊಲೀಸರೇ ಈ ರೀತಿಯಾದರೆ ನಾವು ಬೇರೆಯಾರನ್ನು ತಿದ್ದುವುದಕ್ಕೆ ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ದೂರವಾಣಿ ಮೂಲಕ ಸ್ಪಂದಿಸಿದ ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, “ಪಡುಬಿದ್ರಿ ಪೊಲೀಸ್ ವಸತಿಗೃಹದ ನಿರ್ವಹಣೆಯ ಕೊರತೆ ಗಮನಕ್ಕೆ ಬಂದಿದೆ. ಈ ಬಗ್ಗೆ ತಕ್ಷಣವೇ ಕಾರ್ಯಾಚರಿಸಿ ಮುಳ್ಳು ಪೊದೆ ಹಾಗೂ ಪಕ್ಕದಲ್ಲಿರುವ ತ್ಯಾಜ್ಯ ತೆರವು ಕಾರ್ಯ ನಡೆಸಲಾಗುವುದು ಮತ್ತು ವಸತಿಗೃಹಕ್ಕೆ ಸುಣ್ಣ ಬಣ್ಣ ಹೊಡೆಸುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ, ಅದು ಕೂಡಾ ಶೀಘ್ರವಾಗಿ ನಡೆಯಲಿದೆ” ಎಂದರು.