ಪರಿಹಾರ ನೀಡಿದ ನಂತರ ಕಟ್ಟಡಗಳ ತೆರವು : ಡೀಸಿ

ಪಡುಬಿದ್ರಿ ಹೆದ್ದಾರಿ ಚತುಷ್ಪಥ ಯೋಜನೆ

ಉಡುಪಿ : ಪಡುಬಿದ್ರಿ ಪೇಟೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಯೋಜನೆಯಿಂದಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಕಳೆದುಕೊಳ್ಳಲಿರುವ  ಕಟ್ಟಡ ಮಾಲಕರೊಂದಿಗೆ ಪರಿಹಾರ ವಿಚಾರ ಚರ್ಚಿಸಿ ಅಂತಿಮಗೊಳಿಸಿದ ನಂತರ ಕಟ್ಟಡಗಳ ತೆರವು ಕಾರ್ಯಾಚರಣೆ   ನಡೆಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ. ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಅವರು ಈಗಾಗಲೇ ಪರಿಹಾರ ವಿಚಾರದಲ್ಲಿ ಸಂಬಂಧಿತರೊಂದಿಗೆ ಚರ್ಚೆ

ನಡೆಸುತ್ತಿದ್ದಾರೆ, ಹಲವು ಕಟ್ಟಡ ಮಾಲಕರು ಪರಿಹಾರ ಪಡೆಯಲು ಒಪ್ಪಿದ್ದರೆ ಇನ್ನು ಕೆಲವರು ಇನ್ನೂ ಪರಿಹಾರ ದೊರೆತಿಲ್ಲ ಎಂದಿದ್ದಾರೆ, ಎಂದು ಸುದ್ದಿಗಾರರೊಡನೆ ಮಾತನಾಡಿದ ಫ್ರಾನ್ಸಿಸ್ ಹೇಳಿದ್ದಾರೆ.

ಹೆದ್ದಾರಿ ಅಗಲೀಕರಣ ಯೋಜನೆಯಿಂದ ತಾವು ಕಳಕೊಳ್ಳಲಿರುವ ತಮ್ಮ ಕಟ್ಟಡದ ಭಾಗಗಳನ್ನು ಕೆಲ  ಕಟ್ಟಡಗಳ ಮಾಲಕರು ತಾವೇ ಕೆಡವಲು ಆರಂಭಿಸಿದ್ದಾರೆ. ಚತುಷ್ಪಥ ಕಾಮಗಾರಿಯನ್ನು ವಹಿಸಿಕೊಂಡಿರುವ ನವಯುಗ ಕಂಪೆನಿ ಈಗಾಗಲೇ ಕೆಡವಬೇಕಾಗಿರುವ ಕಟ್ಟಡಗಳ ಭಾಗಗಳಿಗೆ ಗುರುತು ಹಾಕಿದೆ.

ಸದ್ಯವೇ ಶಾಲಾ ಪ್ರಿನ್ಸಿಪಾಲರ ಸಭೆ

ಕಳೆದ ವರ್ಷದ ಜೂನ್ ತಿಂಗಳಲ್ಲಿ ತ್ರಾಸಿಯಲ್ಲಿ ಸಂಭವಿಸಿದ  ಭೀಕರ ಅಪಘಾತದಲ್ಲಿ ಎಂಟು ಶಾಲಾ ಮಕ್ಕಳ  ಸಾವು ಸಂಭವಿಸಿದ ಘಟನೆಯ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು  ಕೈಗೊಳ್ಳಬೇಕೆಂಬ ನಿಟ್ಟಿನಲ್ಲಿ ತಾವು ಸದ್ಯದಲ್ಲಿಯೇ ಎಲ್ಲಾ ಶಾಲಾ ಮುಖ್ಯಸ್ಥರ  ಹಾಗೂ ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋ, ಹಾಗೂ ವ್ಯಾನ್ ಚಾಲಕರ ಸಭೆ ನಡೆಸುವುದಾಗಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.