ಪಡುಬಿದ್ರಿ ಮೆಸ್ಕಾಂ ನಿರ್ಲಕ್ಷ್ಯಕ್ಕೆ ಕೃಷಿಕರು ಕಂಗಾಲು

ಕೃಷಿಭೂಮಿಯಲ್ಲಿ ವಾಲಿನಿಂತ ವಿದ್ಯುತ್ ಕಂಬ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಬ್ರಿಟಿಷರ ಕಾಲದ ಕಬ್ಬಿಣದ ವಿದ್ಯುತ್ ಕಂಬ, ಧರೆಗುರುಳುವ ಸಿದ್ಧತೆಯಲ್ಲಿ ವಾಲಿನಿಂತ ಸಿಮೆಂಟ್ ಕಂಬ, ಆಯುಷ್ಯ ಕಳೆದುಕೊಂಡು ಆ ಕಂಬಗಳಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಥಳೀಯರು ಮೆಸ್ಕಾಂ ಕಚೇರಿಗಳಿಗೆ ಅದೇಷ್ಟೋ ಬಾರಿ ದೂರು ಅರ್ಜಿ ಸಲ್ಲಿಸಿದ್ದರೂ ಯಾವುದೇ ಅಧಿಕಾರಿ ಸ್ಪಂದಿಸದ ಕಾರಣ ಸಮಸ್ಯೆ ಈಗಲೂ ಜೀವಂತವಾಗಿದ್ದು, ಈ ಭಾಗದ ರೈತರು ಪ್ರಾಣಭೀತಿ ಎದುರಿಸುವಂತಾಗಿದೆ.

ಕಂಬದಲ್ಲಿನ ಅವ್ಯವಸ್ಥೆ-ಅಪಾಯಕಾರಿತಂತಿ ಜೋಡನೆ
ಕಂಬದಲ್ಲಿನ ಅವ್ಯವಸ್ಥೆ-ಅಪಾಯಕಾರಿತಂತಿ ಜೋಡನೆ

ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಲಕ್ಷ್ಮಣ ಪಾತ್ರಿ, “ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಭಾಗದ ಕೃಷಿಕರಾದ ನಾವು ಪ್ರಾಣಭಯ ಎದುರಿಸುತ್ತಲೇ ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಿದ್ದೇವೆ. ಇದೀಗ ಮುಂದಿನ ಮಳೆಗಾಲದ ಸಂದರ್ಭ ಮತ್ತೆ ಕೃಷಿ ಚಟುವಟಿಕೆ ಆರಂಭವಾಗುತ್ತದೆ. ಕೃಷಿಯನ್ನೇ ನಂಬಿ ಜೀವಿಸುವ ನಾವು ಪ್ರಾಣವನ್ನು ಒತ್ತೆ ಇಟ್ಟಾದರೂ ಕೃಷಿ ನಡೆಸಲೇಬೇಕಾಗಿದೆ. ಆಯುಷ್ಯ ಕಳೆದುಕೊಂಡು ಕೈಗೆಟುಕುವಂತಿರುವ ವಿದ್ಯುತ್ ತಂತಿಗೆ ನೂರೆಂಟು ಕಡೆಗಳಲ್ಲಿ ತೇಪೆ ಹಾಕಲಾಗಿದೆ. ಉಡುಪಿ-ಕಾಪು ಸಹಿತ ಪಡುಬಿದ್ರಿ ಮೆಸ್ಕಾಂ ಕಚೇರಿಗೆ ದೂರು ನೀಡಿದಾಗ ಸ್ಥಳಕ್ಕೆ ಬಂದ ಕೆಲ ಅಧಿಕಾರಿಗಳು ಸಮಸ್ಯೆಯನ್ನು ಕಣ್ಣಾರೇ ಕಂಡು ಸಮಸ್ಯೆ ಪರಿಹರಿಸುವ ಗಡುವು ನೀಡಿ ಹೋದವರು ಈವರೆಗೂ ಮರಳಿ ಬಂದಿಲ್ಲ. ತೆಂಕ ಗ್ರಾ ಪಂ ಗ್ರಾಮಸಭೆಯಲ್ಲಿ ಈ ಬಗ್ಗೆ ದೂರಿತ್ತಾಗ ರಾಜಕಾರಣಿಗಳಂತೆ ಒಂದೇ ವಾರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು ಸಭೆಯಲ್ಲಿದ್ದ ಅಂದಿನ ಶಾಖಾಧಿಕಾರಿ ಗಿರೀಶ್ ಮಲ್ಯ. ಆದರೆ ಈ ವರೆಗೂ ಸಮಸ್ಯೆ ಪರಿಹರಿಸುವತ್ತ ಯೋಚಿಸದ ಮೆಸ್ಕಾಂ ಅಧಿಕಾರಿಗಳು ಈ ಭಾಗದ ಬಡ ಕೃಷಿಕರಾದ ನಮ್ಮ ಸಹನೆ ಪರೀಕ್ಷೆ ಮಾಡಲು ಮುಂದಾದಂತಿದೆ” ಎಂದಿದ್ದಾರೆ.