3 ಕೇಜಿ ನಕಲಿ ಚಿನ್ನ ಮೇಲೆ ಸಾಲ ಪಡೆದಿದ್ದ ಆಚಾರ್ಯ

ಪಡುಬೆಳ್ಳೆಯ ಸಾಮೂಹಿಕ ಆತ್ಮಹತ್ಯೆಗೆ ವಿಚಿತ್ರ ತಿರುವು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಪಡುಬೆಳ್ಳೆಯ ನಿವಾಸಿ ಚಿನ್ನದ ವ್ಯಾಪಾರಿ ಶಂಕರ ಆಚಾರ್ಯ ಕುಟುಂಬ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವನ್ನು ಪಡೆದುಕೊಂಡಿದ್ದು, ಮೃತ ಶಂಕರ ಆಚಾರ್ಯ ಸಹಕಾರಿ ಬ್ಯಾಂಕೊಂದರಲ್ಲಿ ಸುಮಾರು 3 ಕೇಜಿ ನಕಲಿ ಚಿನ್ನವನ್ನು ಅಡವಿಟ್ಟು 65 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವುದು ಇದೀಗ ಬೆಳಕಿಗೆ ಬಂದಿದ್ದು, ಸಾಲಬಾಧೆಯಿಂದಲೇ ಈ ಕೃತ್ಯ ಮಾಡಿಕೊಂಡರೆನ್ನಲಾಗಿದೆ.

ಮುಂದಿನ ಸೆಪ್ಟಂಬರ್ ಮೂರನೇ ತಾರೀಕಿನಂದು ಶಂಕರ ಅಚಾರ್ಯರ ಮಗಳು ಶೃತಿಯ ಮದುವೆ ನಡೆಯುವುದಿದ್ದು, ಅದಕ್ಕೂ ಹಣದ ಅಡಚಣೆಯಾಗಿದೆ. ಇದೇ ಸಂದರ್ಭ ತಾವು ಬ್ಯಾಂಕಿನಲ್ಲಿ ಅಡವಿಟ್ಟ ನಕಲಿ ಚಿನ್ನದ ಬಗ್ಗೆ ಗೊತ್ತಾದರೆ, ನನ್ನ ಹಾಗೂ ಕುಟುಂಬದ ಮಾನ ಹರಾಜಾಗಬಹುದೆಂದು ಹೆದರಿ, ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೆ ವಿಷ ಕೊಟ್ಟು ಅವರನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಕಳೆದ ಮೂವತ್ತು ವರ್ಷಗಳಿಂದ ಪಡುಬೆಳ್ಳೆಯಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿದ್ದ ಶಂಕರ ಆಚಾರ್ಯ, ಪತ್ನಿ ನಿರ್ಮಲಾ ಆಚಾರ್ಯ ಹಾಗೂ ಇಬ್ಬರು ಪುತ್ರಿಯರು ಕಳೆದ ಗುರುವಾರ ನಿಗೂಢವಾಗಿ ಮೃತಪಟ್ಟ ಘಟನೆ ರಾಜ್ಯಾಧ್ಯಂತ ಸುದ್ದಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಹಲವಾರು ಊಹಾಪೋಹಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ಊಹಾಪೋಹಕ್ಕೆ ತೆರೆಬಿದ್ದಿದೆ.

 ಹಣ ಬೇಡಿದ ಶೃತಿ

ಶಂಕರ ಆಚಾರ್ಯರ ಹಿರಿಯ ಮಗಳು ಶೃತಿಗೆ ಹೈದರಾಬಾದಿನಲ್ಲಿ ಉದ್ಯೋಗದಲ್ಲಿರುವ ಕಾರ್ಕಳ ನಿವಾಸಿಯೊಂದಿಗೆ ಮದುವೆ ನಿಗದಿ ಆಗಿದ್ದು, ಕಳೆದ ಗುರುವಾರ ಮುಂಜಾನೆ ಶೃತಿ ತನ್ನ ಭಾವೀ ಪತಿಗೆ ದೂರವಾಣಿ ಕರೆ ಮಾಡಿ, ನನ್ನ ತಂದೆ 15 ಲಕ್ಷ ರೂಪಾಯಿಯ ಚಿನ್ನವನ್ನು ಕಳೆದುಕೊಂಡಿದ್ದಾರೆ, ನಮಗೆ ಹದಿನೈದು ಲಕ್ಷ ರೂಪಾಯಿ ಬೇಕಾಗಿದೆ ನೀಡುವಂತೆ ವಿನಂತಿಸಿದ್ದಾಳೆ. ಆದರೆ ಭಾವೀ ಪತಿ “ಅಷ್ಟು ಮೊತ್ತದ ಹಣ ನನ್ನಲ್ಲಿಲ್ಲ, ಇದೀಗ ಒಂದೆರಡು ಲಕ್ಷ ರೂಪಾಯಿ ನೀಡಬಹುದು” ಎಂದಾಗ ಕರೆ ಕಟ್ ಮಾಡಿದ್ದಾಳೆ ಶೃತಿ. ಆ ಬಳಿಕದ ಕೆಲ ಹೊತ್ತಿನಲ್ಲಿ ಕುಟುಂಬದ ಎಲ್ಲರೂ ಮೃತದೇಹವಾಗಿ ಮನೆಯ ದೇವರ ಕೋಣೆಯ ಸಮೀಪ ಪತ್ತೆ ಆಗಿದ್ದರು. ಯಾವುದೇ ಡೆತ್ ನೋಟ್ ಬರೆದಿಡದೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ, ಕೆಲವರು ಹಣದ ಅಡಚಣೆಯಿಂದ ಈ ಕೃತ್ಯ ಮಾಡಿಕೊಂಡಿರಬಹುದೆಂಬ ಸಂಶಯ ವ್ಯಕ್ತ ಪಡಿಸಿದ್ದರೆ, ಮತ್ತೆ ಕೆಲವರು ಮಕ್ಕಳ ಶೀಲದ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದರು.

 ಇನ್ನಂಜೆ ಸಹಕಾರಿ ಬ್ಯಾಂಕಲ್ಲಿ ಸಾಲ

ಶಂಕರ ಆಚಾರ್ಯರು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಕುರ್ಕಾಲು ಬ್ಯಾಂಕ್ ವ್ಯವಸ್ಥಾಪಕ ಉಮೇಶ್ ಅಮೀನ್ ತಕ್ಷಣ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮನೋಹರ್ ರಾವ್ ಅವರಿಗೆ ಕರೆಮಾಡಿ ತಿಳಿಸಿದ್ದರು. ಮದ್ಯಾಹ್ನದ ಬಳಿಕ ಮತ್ತೊಮ್ಮೆ ಕರೆಮಾಡಿ ಶಂಕರ ಆಚಾರ್ಯರು ಚಿನ್ನ ಅಡವಿಟ್ಟು ಸಾಲ ಪಡೆದ ವಿಚಾರ ತಿಳಿಸಿದ್ದಾರೆ. ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ ಮತ್ತೊಬ್ಬ ಚಿನ್ನ ಪರೀಕ್ಷಕರನ್ನು ಕರೆಸಿ ಶಂಕರ ಆಚಾರ್ಯರು ಅಡವಿಟ್ಟ ಚಿನ್ನವನ್ನು ಪರೀಕ್ಷೆ ಮಾಡಿಸಿದಾಗ ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ ವಂಚಿಸಿದ ವಿಚಾರ ತಿಳಿದುಬಂದಿದೆ.

ಮೃತ ಶಂಕರ ಆಚಾರ್ಯ ಸುಮಾರು ಹದಿನೈದು ವರ್ಷಗಳಿಂದ ಇನ್ನಂಜೆ ಸಹಕಾರಿ ಬ್ಯಾಂಕಿನ ಕುರ್ಕಾಲು ಶಾಖೆಯಲ್ಲಿ ವ್ವವಹಾರ ನಡೆಸುತ್ತಿದ್ದು, ಬ್ಯಾಂಕ್ ಸಿಬ್ಬಂದಿಗೆ ಚಿರಪರಿಚಿತರಾಗಿದ್ದರು. ಹಲವಾರು ಬಾರಿ ಚಿನ್ನಅಡವಿಟ್ಟು ಸಾಲ ಪಡೆದು ಯಾವುದೇ ತಕರಾರಿಲ್ಲದೆ ಮರುಪಾವತಿ ಮಾಡುತ್ತಿದ್ದರು.

 ಅಧಿಕಾರಿಗಳ ಕೈವಾಡ ಶಂಕೆ

ಬ್ಯಾಂಕಿನಲ್ಲಿ ಚಿನ್ನದ ಮೇಲೆ ಸಾಲ ನೀಡುವ ಮೊದಲು ಚಿನ್ನವನ್ನು ಬ್ಯಾಂಕಿನ ಚಿನ್ನ ಪರೀಕ್ಷಕ ಅದನ್ನು ಪರೀಕ್ಷಿಸಿ ಗುಣಮಟ್ಟವನ್ನು ತಿಳಿಸಬೇಕಿದೆ. ಅಂತೆಯೇ ಒಬ್ಬ ಬ್ಯಾಂಕ್ ವ್ಯವಸ್ಥಾಪಕನಿಗೆ ಕೇವಲ 5 ಲಕ್ಷ ರುಪಾಯಿ ಸಾಲ ನೀಡುವ ಹಕ್ಕಿದೆ. ಹೆಚ್ಚಿನ ಸಾಲ ಬೇಕಿದ್ದರೆ ಆಡಳಿತ ಮಂಡಳಿ ಶಿಫಾರಸು ಮಾಡಬೇಕಿದೆ. ಇಲ್ಲಿ ಯಾವುದೇ ಪ್ರಕ್ರಿಯೆ ನಡೆಯದೆ ಮೃತ ಶಂಕರ ಆಚಾರ್ಯಗೆ 65 ಲಕ್ಷ ರೂಪಾಯಿ ಸಾಲವನ್ನು ಹೇಗೆ ನೀಡಿದ್ದಾರೆ ಎಂಬುದು ಸಂಶಯಕ್ಕೆ ಎಡೆಮಾಡಿದೆ.

ಈ ಕೃತ್ಯದಲ್ಲಿ ಶಂಕರ ಆಚಾರ್ಯರೊಂದಿಗೆ ಹಲವಾರು ಮಂದಿ ಶಾಮೀಲಾಗಿರುವ ಶಂಕೆಯನ್ನು ಆಡಳಿತ ಮಂಡಳಿ ವ್ಯಕ್ತ ಪಡಿಸುತ್ತಿದ್ದು, ಈ ಬಗ್ಗೆ ಮೃತ ಶಂಕರ ಆಚಾರ್ಯ, ಚಿನ್ನ ಪರೀಕ್ಷಕ ಉಮೇಶ ಆಚಾರ್ಯ, ಬ್ಯಾಂಕಿನ ಪ್ರಭಂದಕ ಉಮೇಶ್ ಅಮೀನರವರು ತಮ್ಮ ಬ್ಯಾಂಕಿಗೆ ವಂಚಿಸಿದ್ದಾರೆ ಎಂದು ಇನ್ನಂಜೆ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮನೋಹರ ರಾವ್ ಶಿರ್ವ ಠಾಣೆಗೆ ದೂರು ನೀಡಿದ್ದು, ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.