ಪಡುಬಿದ್ರಿ ಹೆದ್ದಾರಿ ಕಾಮಗಾರಿಗೆ ಇನ್ನೂ ಸಿಕ್ಕಿಲ್ಲ ಚಾಲನೆ

ವಾಹನ ಜಂಗುಳಿಯಿಂದ ಇಕ್ಕಟ್ಟಾದ ಪಡುಬಿದ್ರಿ ಪೇಟೆ

ಅಂದು ನ್ಯಾಯಾಲಯದ ತಡೆ,ಇದೀಗ ಹಣದ ಕೊರತೆಯಂತೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಈ ಭಾಗದ ರಾಜಕೀಯ ಧುರೀಣರಿಂದ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಅಂದು ನ್ಯಾಯಾಲಯದಿಂದ ತಡೆ ಇದೆ ಎಂಬುದಾಗಿ ಕಾಮಗಾರಿ ತಡೆ ಹಿಡಿಯಲ್ಪಟ್ಟರೆ, ಇದೀಗ ಗುತ್ತಿಗೆ ವಹಿಸಿಕೊಂಡಿರುವವರಲ್ಲಿ ಹಣವಿಲ್ಲದಿರುವುದರಿಂದ ಕಾಮಗಾರಿಗೆ ಚಾಲನೆಯೇ ದೊರೆತಿಲ್ಲ ಎಂಬುದು ಗುತ್ತಿಗೆದಾರರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಈ ಸಮಸ್ಯೆಯ ಬಗ್ಗೆ ಚರ್ಚಿಸಿ ಒಂದು ಮಹತ್ತರ ನಿರ್ಧಾರ ಕೈಗೊಳ್ಳಬೇಕಾದ ಈ ಭಾಗದ ಜನಪ್ರತಿನಿಧಿಗಳು ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ಜಾಣ ಮೌನ ತಾಳಿದ್ದಾರೆ. ಇಂಥ ವ್ಯಕ್ತಿಗಳನ್ನು ಜನಪ್ರತಿನಿಧಿಗಳಾಗಿ ಆರಿಸಿ ಕಳುಹಿಸಿದ ತಪ್ಪಿಗಾಗಿ ತಾವೀಗ ಕೊರಗುತ್ತಿದ್ದೇವೆ ಎನ್ನುತ್ತಾರೆ ಈ ಭಾಗದ ಮತದಾರರು.

ಪಡುಬಿದ್ರಿ ಪೇಟೆಯಲ್ಲಿ ನಿರಂತವಾಗಿ ನಡೆಯುತ್ತಿರುವ ರಸ್ತೆ ಬ್ಲಾಕಿನಿಂದಾಗಿ ಮೂರು ಕಿ ಮೀ ರಸ್ತೆಯನ್ನು ಆಕ್ರಮಿಸಿಲು ಗಂಟೆಗಟ್ಟಲೆ ಕಾಯಬೇಕಾದ ದುಃಸ್ಥಿತಿ ಒಂದು ಕಡೆಯಾದರೆ, ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳ ವೇಗವನ್ನು ಗಮನಿಸಲಾಗದೆ ಅದೆಷ್ಟೋ ಅಮಾಯಕರ ವಾಹನಗಳು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿದೆ. ಈ ಘಟನೆಯಿಂದಾದರೂ ಎಚ್ಚರಗೊಳ್ಳಬೇಕಾಗಿದ್ದ ಜನಪ್ರತಿನಿಧಿಗಳಾಗಲೀ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲೀ ತಮ್ಮ ಕರ್ತವ್ಯ ಮರೆತು ಎಸಿ ಕೋಣೆಯಲ್ಲಿ ತಣ್ಣಗಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶದ ನುಡಿ.

ಎರಡು ತಂಡಗಳ ವಿವಾದದ ನಡುವೆಯೂ ಏಕಪಕ್ಷೀಯವಾಗಿ ಐತಿಹಾಸಿಕ ಪಡುಬಿದ್ರಿ ಪೇಟೆ ಎಂಬುದಾಗಿ ಹೇಳಿ ಮರೆಯಾದ ಈ ಭಾಗದ ಸಂಸದೆ ಶೋಭಾ ಕರಂದ್ಲಾಜೆ ಇಂದಿಗೂ ನಾಪತ್ತೆ !

ಶಾಸಕರಂತೂ ಹತ್ತಾರು ಬಾರಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಎಲ್ಲಿಯೂ, ಯಾವ ಕಾರ್ಯಕ್ರಮದಲ್ಲೂ ಈ ಬಗ್ಗೆ ಮಾತೆತ್ತಿದಂತಿಲ್ಲ. ಸಂಸದೆಗೆ ಇಲ್ಲಿನ ಹೆದ್ದಾರಿ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಬೇಕಾಗಿದ್ದ ಅವರದ್ದೇ ಪಕ್ಷದ ತಾ ಪಂ ಸದಸ್ಯರಾಗಲೀ, ಜಿ ಪಂ ಸದಸ್ಯರಾಗಲೀ ಇದನ್ನು ಸಮಸ್ಯೆಯಾಗಿ ಸ್ವೀಕರಿಸಿದಂತೆ ಕಾಣುತ್ತಿಲ್ಲ ಎಂಬುದು ಈ ಹೆದ್ದಾರಿಯಿಂದ ನಿತ್ಯ ಸಮಸ್ಯೆ ಅನುಭವಿಸುತ್ತಿರುವ ಜನರ ಮಾತು.

 

ಟೋಲ್ ಸಂಗ್ರಹಕ್ಕೆ ದಿನಗಣನೆ

ಟೋಲ್ ಗೇಟ್ ಸಂಧಿಸಬೇಕಾಗಿದ್ದ ಸುಮಾರು ಮೂರು ಕಿ ಮೀ ದೂರದವರಗೆ ಹೆದ್ದಾರಿ ಚಿಂದಿಯಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬುದು ಒಂದು ಕಡೆಯಾದರೆ, ಚತುಷ್ಪಥ ಕಾಮಗಾರಿ ನಡೆದ ಭಾಗಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಗೊಳ್ಳದೆ ಶಾಲಾ ವಾಹನಗಳು ಸಹಿತ ಇತರೆ ವಾಹನಗಳು ವಿರುದ್ಧ ದಿಕ್ಕಿನಿಂದ ಚಲಿಸಿ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗುತ್ತಿದರೂ ಇದನ್ನು ಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಮುಂದಾಗಿದೆ ನವಯುಗ್ ಕಂಪನಿ. ಈ ಟೋಲ್ ವಿರುದ್ಧ ಸ್ಥಳೀಯ ಶಾಸಕರನ್ನು ಸೇರಿಸಿ ಹೋರಾಟಕ್ಕೆ ಮುನ್ನುಡಿ ಬರೆದ ಸ್ಥಳೀಯ ಸಂಸ್ಥೆಯೊಂದು ಆಗೊಮ್ಮೆ-ಈಗೊಮ್ಮೆ ಪತ್ರಿಕಾ ಹೇಳಿಕೆ ನೀಡುತ್ತಿದೆ ಬಿಟ್ಟರೆ ನಿರೀಕ್ಷಿತ ಹೋರಾಟದ ಕಿಚ್ಚು ಎಲ್ಲೂ ಕಾಣಿಸುತ್ತಿಲ್ಲ.

ಮೂರು ಬಾರಿ ಹೆದ್ದಾರಿಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ ಕಾಮಗಾರಿಯ ಮುನ್ಸೂಚನೆ ನೀಡಿರುವ ಇಲಾಖೆ ಇದೀಗ ನಾಲ್ಕನೇ ಬಾರಿ ಇಕ್ಕೆಲ ಸ್ವಚ್ಛಗೊಳಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ನಡೆಸುತ್ತಿದ್ದು, ಕಾಮಗಾರಿ ಆರಂಭವಾಗುವ ಸೂಚನೆ ಕಂಡುಬರುತ್ತಿಲ್ಲ, ಸರ್ಕಾರದ ಪ್ರತೀ ಯೋಜನೆಗಳನ್ನು ಜನರು ಹೋರಾಟ ನಡೆಸಿಯೇ ಪಡೆಯಬೇಕೆಂಬ ನಿರ್ಧಾರಕ್ಕೆ ಹೆದ್ದಾರಿ ಇಲಾಖೆ ಬಂದಂತಿದ್ದು, ಮುಂದಿನ ದಿನದಲ್ಲಿ ಪಡುಬಿದ್ರಿಯಲ್ಲಿನ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಜನ ಪಕ್ಷಭೇದ, ಜಾತಿ-ಭೇದ ಮರೆತು ಹೋರಾಟಕ್ಕೆ ಧುಮುಕುವ ಅನಿರ್ವಾಯತೆಯಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.