ರದ್ದಿ ಪೇಪರಿನಲ್ಲಿ ಎಣ್ಣೆ ತಿಂಡಿ ತಿನಿಸು ಕಟ್ಟಿಕೊಡುವುದು ಹೊಣೆಗೇಡಿ ಕೃತ್ಯ

ಸ್ಮಾರ್ಟ್ ಸಿಟಿ ಆಗಲಿರುವ ಮಂಗಳೂರಿನ ನಗರದ ಸ್ಟೇಟ್‍ಬ್ಯಾಂಕ್ ಮಾರ್ಕೆಟ್‍ನೊಳಗೆ, ಕಾರ್‍ಸ್ಟ್ರೀಟ್, ಮಾರ್ಕೆಟ್ ರೋಡ್ ಮುಂತಾದ ಜನ ಸಂದಣಿ ವಲಯಗಳಲ್ಲಿ, ನಾನು ಬಹು ಸಮಯದಿಂದ ಬೀದಿ ಬದಿಯಲ್ಲಿ ಕಾರ್ಯಾಚರಿಸುತ್ತಿರುವ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ಹಳೇ ಪೇಪರುಗಳಲ್ಲಿ ಎಣ್ಣೆಯಲ್ಲಿ ಕಾಯಿಸಿದ ತಿಂಡಿ ತಿನಿಸುಗಳನ್ನು ಕಟ್ಟಿ ಕೊಡುತ್ತಿರುವುದನ್ನು ಗಮನಿಸಿದ್ದೇನೆ.

ಒಂದು ಉದಾಹರಣೆಯಾಗಿ ಮಂಗಳೂರಿನ ಮಾರ್ಕೆಟ್ ರೋಡ್ ನಾಲ್ಕು ರಸ್ತೆ ಸೇರುವ ಜ್ಯುಸ್ ಕಾರ್ನರಿನ ಪಕ್ಕದಲ್ಲಿ ಅಂದರೆ ಜನತಾ ಜ್ಯೂಸ್ ಹೌಸ್ ಎದುರುಗಡೆ ಒಬ್ಬರು. ಹಳೇ ಪೇಪರಿನಲ್ಲಿಯೇ ಕರಿದ ವಸ್ತುಗಳನ್ನು ಗ್ರಾಹಕರಿಗೆ ಕಟ್ಟಿ ಕೊಡುತ್ತಿದ್ದಾರೆ. ಈ ಬಗ್ಗೆ ನಾನು ಹಲವಾರು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರೂ, ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅತೀವ ಬೇಸರದಿಂದ ಹೇಳಬೇಕಾಗುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪರರ ಕಾಳಜಿ ಇಲ್ಲದ ಈ ವ್ಯಾಪಾರಿಗಳು ಹಳೇ ಪೇಪರ್‍ಗಳನ್ನು ತ್ಯಜಿಸಿ, ಗ್ರಾಹಕರಿಗೆ ಯೋಗ್ಯ ಪೊಟ್ಟಣಗಳಲ್ಲಿ ತಿಂಡಿಗಳನ್ನು ಕಟ್ಟಿಕೊಡಲು ಸೂಚಿಸಬೇಕು. ತಪ್ಪಿದ್ದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ.

ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ಇಂಥವರು ಅಲ್ಲಲ್ಲಿ ಇರುವುದರಿಂದ ಇಂಥವರನ್ನು ಹುಡುಕಿ, ಹಳೇ ಪೇಪರ್‍ಗಳ ಉಪಯೋಗದಿಂದ ಉಂಟಾಗುವ ಅಪಾಯಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಿ, ಜನಸಾಮಾನ್ಯರ ಜೀವಗಳೊಡನೆ ಚೆಲ್ಲಾಟವಾಡುವುದನ್ನು ಇನ್ನಾದರೂ ನಿಲ್ಲಿಸಲಿ. ಇದುವೇ ನನ್ನ ಈ ಮನವಿ ಪತ್ರದ ಉದ್ದೇಶ.

  • ಫ್ರಾನ್ಸಿಸ್ ಬಿ ಸಲ್ದಾನಾ, ಮಂಗಳೂರು