ಭಿಕ್ಷುಕರ ಆಶ್ರಯ ತಾಣ ಪಚ್ಚನಾಡಿ ನಿರಾಶ್ರಿತರ ಕೇಂದ್ರ


ಇಲ್ಲಿ ಮನಪರಿವರ್ತನೆ ಜೊತೆಗೆ

ಸ್ವಾವಲಂಬಿ ಬದುಕಿಗೂ ದಾರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ಕಂಡು ಬರುತ್ತಿರುವ ಭಿಕ್ಷುಕರನ್ನು, ಅಲೆಮಾರಿಗಳನ್ನು ನಿರ್ವಹಣೆ ಮಾಡುವುದೇ ಪಾಲಿಕೆಗೆ ದೊಡ್ಡ ಸವಾಲು. ಪೊಲೀಸರನ್ನು ಕೂಡಾ ಇಂತಹ ಭಿಕ್ಷುಕರು ಹೈರಾಣು ಮಾಡುವುದಿದೆ. ದೂರದ ಕೇರಳ, ತಮಿಳುನಾಡಿನಿಂದ ರೈಲಿನಲ್ಲಿ ಬರುವ ಅಲೆಮಾರಿಗಳು ನಗರದಲ್ಲಿ ತುಂಬಿಕೊಂಡಿದ್ದು ಎಲ್ಲೆಂದರಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಭಿಕ್ಷಾಟನೆ ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದರೂ ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇವರು ಕಂಡು ಬರುತ್ತಿದ್ದಾರೆ.

ದ ಕ ಹಾಗೂ ಉಡುಪಿ ಜಿಲ್ಲೆಯ ಭಿಕ್ಷುಕರಿಗಾಗಿ ಮಂಗಳೂರು ನಗರದ ಪಚ್ಚನಾಡಿಯಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವೊಂದು ಕಾರ್ಯಾಚರಿಸುತ್ತಿದ್ದು, ಇಲ್ಲಿ ಭಿಕ್ಷುಕರ ಮನಪರಿವರ್ತನೆಯ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಕನಿಷ್ಠ ಒಂದು ವರ್ಷದಿಂದ ಗರಿಷ್ಠ 3 ವರ್ಷಗಳವರೆಗೆ ಇಲ್ಲಿ ಉಳಿಸಿಕೊಂಡು ಅವರ ಮನಪರಿವರ್ತನೆ ಜೊತೆಗೆ, ಧ್ಯಾನ, ಗೃಹಕೈಗಾರಿಕೆ, ತೋಟದ ಬೆಳೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಅವರ ವಿಳಾಸ ಪತ್ತೆ ಮಾಡಿ ಮನೆಗೆ ಕಳುಹಿಸಲಾಗುತ್ತದೆ. ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿ ಮೂಲಕ ಈ ಕೇಂದ್ರಗಳನ್ನು ನಿರ್ವಹಣೆ ಮಾಡಲಾಗುತ್ತದೆ.

ಪಚ್ಚನಾಡಿನಲ್ಲಿರುವ ನಿರಾಶ್ರಿತರ ಕೇಂದ್ರವು 2 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, ಇಲ್ಲಿ 175 ಮಂದಿ ನಿರಾಶ್ರಿತರನ್ನು ಸಲಹಲಾಗುತ್ತಿದೆ. 168 ಮಂದಿ ಪುರುಷರು, 11 ನಿರ್ಗತಿಕ ಮಹಿಳೆಯರು ಇಲ್ಲಿದ್ದಾರೆ. ಕೇಂದ್ರದಲ್ಲಿ ಮೂರು ಮಂದಿ ಖಾಯಂ ಸಿಬ್ಬಂದಿ ಸಹಿತ ಒಟ್ಟು 11 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರಾಶ್ರಿತರ ಊಟೋಪಹಾರ ಸೇರಿ ಕೇಂದ್ರಕ್ಕೆ ಅಂದಾಜು 60 ಲಕ್ಷ ರೂ.ವರೆಗೆ ಅನುದಾನ ಸಿಗುತ್ತದೆ ಎನ್ನುತ್ತಾರೆ ಪ್ರಭಾರ ಅಧೀಕ್ಷಕರಾಗಿರುವ ಅಶೋಕ್.

ಪಚ್ಚನಾಡಿ ನಿರಾಶ್ರಿತರ ಪರಿಹಾರ ಕೇಂದ್ರ ಇತರ ಎಲ್ಲ ಇಲಾಖೆಗಳಿಗೂ ಮಾದರಿ. ಒಂದೆಡೆ ಶುಚಿಯಾದ ಕಟ್ಟಡ, ಸುತ್ತಮುತ್ತ ಹಣ್ಣು, ತರಕಾರಿ, ಹೂವಿನ ಗಿಡಗಳು ಕಂಗೊಳಿಸುತ್ತಿದೆ. ಮನೆಯೂ ಅಷ್ಟು ಚೆನ್ನಾಗಿ ಇರಲಿಕ್ಕಿಲ್ಲ ಎಂಬ ರೀತಿಯಲ್ಲಿ ನಿರಾಶ್ರಿತರ ಕೇಂದ್ರವನ್ನು ಅಚ್ಚುಕಟ್ಟಾಗಿ ಇರಿಸಲಾಗಿದೆ.

ಕೇಂದ್ರದ ಸ್ವಚ್ಛತೆಯಿಂದ ಹಿಡಿದು ತರಕಾರಿ ಗಿಡಗಳನ್ನು ಬೆಳೆಸುವುದು, ಹೂವಿನ ಗಿಡಗಳ ನಿರ್ವಹಣೆ ಹೀಗೆ ಎಲ್ಲವನ್ನೂ ಇಲ್ಲಿನ ಭಿಕ್ಷುಕರೇ ಮಾಡುತ್ತಾರೆ. ಕಾಲಕಾಲಕ್ಕೆ ಇವರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತಿದೆ. ಪೇಪರ್ ಕಟ್ಟಿಂಗ್, ಪೇಪರ್ ಚೀಲಗಳು, ಲೋಟಗಳನ್ನು ತಯಾರಿಸುವ ತರಬೇತಿಯನ್ನೂ ನೀಡಿ ಸ್ವಾವಲಂಬಿ ಬದುಕಿನತ್ತ ಮನಪರಿವರ್ತನೆ ಮಾಡಲಾಗುತ್ತದೆ.

 

 

LEAVE A REPLY