ಲಾರಿ ಚಾಲಕಗೆ ಮಾಲಕ ಹಲ್ಲೆ , ಜೀವ ಬೆದರಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಲಾರಿಯನ್ನು ಮಾರ್ಗ ಪಕ್ಕದಲ್ಲಿ ನಿಲ್ಲಿಸಿ ಡಾಬಾದಲ್ಲಿ ಊಟ ಮುಗಿಸಿ ಬರುತ್ತಿದ್ದ ಲಾರಿ ಚಾಲಕ ಪುತ್ತೂರು ನಿವಾಸಿ ವಿ ಹಂಝ ಹಾಗೂ ಆತನ ಸ್ನೇಹಿತನ ಮೇಲೆ ಮೂವರ ತಂಡವೊಂದು ರಾಡಿನಿಂದ ಹೊಡೆದು ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ ಒಡ್ಡಿ ಪರಾರಿಯಾಗಿರುವ ಬಗ್ಗೆ ದೂರು ನೀಡಲಾಗಿದೆ.

ತಾಲೂಕಿನ ಅಡ್ಯಾರ್ ಗ್ರಾಮದ ಸಹ್ಯಾದ್ರಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಜೋಕಟ್ಟೆಯ ರಿಯಾಜ್, ಅನ್ವರ ಮತ್ತು ಇಬ್ರಾಹಿಂ ಆರೋಪಿಗಳು ಎಂದು ಹೆಸರಿಸಲಾಗಿದೆ. ಜೋಕಟ್ಟೆಯ ರಿಯಾಜ್ ಲಾರಿ ಮಾಲಕರಾಗಿದ್ದು, ಈತನ ಲಾರಿಯಲ್ಲಿ ಹಂಝ ಈ ಹಿಂದೆ ಕೆಲಸ ಮಾಡಿಕೊಂಡಿದ್ದು, ಬಳಿಕ ಅದನ್ನು ಬಿಟ್ಟಿದ್ದರು. ಇದೇ ದ್ವೇಷದಿಂದ ಹಲ್ಲೆ ನಡೆಸಿರಬೇಕೆಂದು ಶಂಕಿಸಲಾಗಿದೆ. “ನೀನು ನಮ್ಮ ಲಾರಿ ಯಾಕೆ ಬಿಟ್ಟೆ, ನಿನ್ನಿಂದಾಗಿ ನನ್ನ ಲಾರಿಗೆ ಚಾಲಕ ಇಲ್ಲದೇ ನಿಂತಿದೆ” ಹಾಗೂ ಇನ್ನೂ ಅವಾಚ್ಯವಾಗಿ ಬೈದು ಕಾಲಿನಿಂದ ತುಳಿದಿದ್ದಾನೆ. ಇಬ್ರಾಹಿಂ  ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಹಂಝರ ಭುಜಕ್ಕೆ ಹೊಡೆದಿದ್ದು, ಅನ್ವರ್ ಕೂಡಾ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.

ಹಂಝ ಜೊತೆಗೆ ಇದ್ದ ಸ್ನೇಹಿತ ಹಿದಾಯತಗೂ ಆರೋಪಿಗಳು. “ಮುಂದೆ ನಿನ್ನನ್ನು ಕೂಡಾ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.