ಬಸ್ ಸಿಬ್ಬಂದಿಗೆ ಮಾಲಕನಿಂದ ಮಾರಣಾಂತಿಕ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ದಿನಭತ್ಯೆ ಹಾಗೂ ಯೂನಿಫಾರಂ ಬೋನಸ್ ಬಗ್ಗೆ ಮಾತನಾಡಲು ಹೋಗಿದ್ದ ಬಸ್ಸಿನ ಸಿಬ್ಬಂದಿಗೆ ಉಡುಪಿ ನಗರದ ಹೊರವಲಯದ ಚಿಟ್ಪಾಡಿ ಹನುಮಾನ್ ಟ್ರಾನ್ಸಪೋರ್ಟ್ ಕಂಪೆನಿ ಮಾಲಿಕ ಕಮ್ ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ, ಆತನ ಕಾರು ಚಾಲಕ, ಆಪ್ತ ಕಾರ್ಯದರ್ಶಿ ಕಮ್ ಜಿಲ್ಲಾ ಬಜರಂಗದಳ ಮುಂಖಡ ಹಾಗೂ ಇಬ್ಬರು ಬಾಡಿಗಾರ್ಡುಗಳ ಸಹಿತ 7 ಮಂದಿಯ ತಂಡವು ಸಿಬ್ಬಂದಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆಗೈದ ಘಟನೆ ನಡೆದಿದೆ.

ಹನುಮಾನ್ ಟ್ರಾನ್ಸಪೊರ್ಟ್ ಕಂಪೆನಿಯ ಬಸ್ಸಿನಲ್ಲಿ ಚೆಕ್ಕಿಂಗ್ ಇನಸ್ಪೆಕ್ಟರುಗಳಾಗಿ ಕೆಲಸ ಮಾಡುತ್ತಿರುವ ಶಿವಮೊಗ್ಗ ನಿವಾಸಿ ಸತೀಶ್ ಹೆಚ್ ಜಿ ಮತ್ತು ಶಿವಮೊಗ್ಗದ ಅಣ್ಣಪ್ಪ ಬಿ ವಿ ಮಾರಣಾಂತಿಕ ಹಲ್ಲೆಗೊಳಗಾದವರು. ಹನುಮಾನ್ ಟ್ರಾನ್ಸಪೋರ್ಟ್ ಮಾಲಿಕ ಕಮ್ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪಾಂಗಾಳ ವಿಲಾಸ್ ನಾಯಕ್, ಆತನ ತಂದೆ ಪಾಂಗಾಳ ಪಿ ಜಿ ನಾಯಕ್, ವಿಲಾಸ್ ನಾಯಕ್ ಕಾರು ಚಾಲಕ ಸಂದೀಪ್, ಆಪ್ತ ಕಾರ್ಯದರ್ಶಿ ಕಮ್ ಬಜರಂಗ ದಳದ ಜಿಲ್ಲಾ ಮುಂಖಡ ಕೆ ಆರ್ ಸುನೀಲ್, ಚೆಕ್ಕಿಂಗ್ ಇನಸ್ಪೆಕ್ಟರ್ ಚಂದ್ರಶೇಖರ, ಮ್ಯಾನೇಜರ್ ರಮೇಶ್ ಎಂಬವರು ಮಾರಣಾಂತಿಕ ಹಲ್ಲೆಗೈದ ಆರೋಪಿಗಳು.

ಹನುಮಾನ್ ಕಂಪೆನಿಯ ಬಸ್ಸಿನಲ್ಲಿ ಚೆಕ್ಕಿಂಗ್ ಇನಸ್ಪೆಕ್ಟರುಗಳಾಗಿ ಕೆಲಸ ಮಾಡುತ್ತಿರುವ ಸತೀಶ್ ಮತ್ತು ಅಣ್ಣಪ್ಪ ಎಂಬವರು ಮಹಾಬಲಪ್ಪ ಮತ್ತು ಇತರ ಸಿಬ್ಬಂದಿ ಜೊತೆ ದಿನಭತ್ಯೆ ಹಾಗೂ ಯುನಿಫಾರಂ ಬೋನಸ್ ಬಗ್ಗೆ ಕಚೇರಿಗೆ ಹೋಗಿ ಮಾತನಾಡಿದಾಗ, ಆರೋಪಿಗಳು ಖಾಸಗಿ ಕೋಣೆಯೊಂದಕ್ಕೆ ಕರೆದಿದ್ದಾರೆ. ಅಲ್ಲಿ ಆರೋಪಿಗಗಳು ಸತೀಶ್ ಮತ್ತು ಅಣ್ಣಪ್ಪರನ್ನು ಅಕ್ರಮವಾಗಿ ಕೂಡಿ ಹಾಕಿ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆಗೈದಿದ್ದಲ್ಲದೇ, ಚೂರಿ ತೋರಿಸಿ ಕೊಲೆಬೆದರಿಕೆಯೊಡ್ಡಿದ್ದಾರೆ ಎಂದು ಸತೀಶ್ ಮತ್ತು ಅಣ್ಣಪ್ಪ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.