ವಾಹನಗಳ ವೇಗಕ್ಕೆ ರಸ್ತೆ ದಾಟಲು ಭಯಪಡುತ್ತಿರುವ ಪಾದಚಾರಿಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವಾಹನ ಸವಾರರ ಬೇಜವಾಬ್ದಾರಿಯುತ ಚಾಲನೆ ಮತ್ತು ಅತೀ ವೇಗ ಭಯಹುಟ್ಟಿಸುತ್ತಿದೆ. ಖಾಸಗಿ ಬಸ್ ಚಾಲಕರ ಧಾವಂತ ಇನ್ನಿಲ್ಲದಂತೆ ಕಾಡುತ್ತಿದ್ದು, ಸಾರ್ವಜನಿಕರು ರಸ್ತೆ ದಾಟುವುದಕ್ಕೆ ಭಯಪಡುವಂತಾಗಿದೆ.

ನಗರದಲ್ಲಿ ಅಳವಡಿಸಲಾಗಿರುವ ಅವೈಜ್ಞಾನಿಕ ಮಾದರಿಯ ಸ್ಪೀಡ್ ಬ್ರೇಕರುಗಳು ಕೂಡಾ ಇದೀಗ ಪಾದಚಾರಿಗಳನ್ನು ಕಾಡುತ್ತಿದೆ. ರಸ್ತೆ ದಾಟುವ ಸಂದರ್ಭದಲ್ಲಿ ನುಗ್ಗಿ ಬರುವ ವಾಹನಗಳು, ಸರಿಯಾದ ಮಾರ್ಗಸೂಚಿಗಳೂ ಇಲ್ಲ. ರಸ್ತೆಯ ಹಲವು ಕಡೆಗಳಲ್ಲಿ ಎಲ್ಲಿ ಸ್ಪೀಡ್ ಬ್ರೇಕರುಗಳು ಬೇಕೋ ಅಲ್ಲಿ ಅಳವಡಿಸಲಾಗಿಲ್ಲ ಎಂದು ಪಾದಚಾರಿಗಳು ದೂರುತ್ತಿದ್ದಾರೆ. ಹೀಗಾಗಿ ಪಾದಚಾರಿಗಳಿಗೆ ರಸ್ತೆ ದಾಟುವುದಕ್ಕೆ ಸಮಸ್ಯೆಯಾಗಿದೆ.

ಇನ್ನು ಕೆಲವು ಕಡೆಗಳಲ್ಲಿ ಝೀಬ್ರಾ ಕ್ರಾಸಿಂಗ್ ಇಲ್ಲ, ಪೊಲೀಸರ ಕಾವಲು ಕೂಡಾ ಇಲ್ಲ. ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ರಸ್ತೆ ದಾಟುವುದಕ್ಕೆ ಕಷ್ಟಕರವಾಗಿದೆ. ಕೆಲವು ಕಡೆ ಹಂಪುಗಳಲ್ಲಿ ಅಳವಡಿಸಲಾಗಿರುವ ಬಿಳಿ ಬಣ್ಣ ಕೂಡಾ ಮಾಸಿ ಹೋಗಿದ್ದು, ವಾಹನ ಸವಾರರು ಏಕಾಏಕಿ ನುಗ್ಗಿಸಿ ಬ್ರೇಕ್ ಹೊಡೆಯುತ್ತಿರುವುದರಿಂದ ಪಾದಚಾರಿಗಳು ಇನ್ನಷ್ಟು ಗಲಿಬಿಲಿಗೊಳ್ಳುತ್ತಿದ್ದಾರೆ.

ನಗರದ ಕೆ ಎಸ್ ರಾವ್ ರಸ್ತೆ ಸೇರಿದಂತೆ ಹಂಪನಕಟ್ಟೆಯಿಂದ ಮಹಾತ್ಮಾಗಾಂಧಿ ರಸ್ತೆಯಲ್ಲಿ ಪ್ರತಿನಿತ್ಯ ವಾಹನಗಳ ದಟ್ಟಣೆ ಹೆಚ್ಚಿದ್ದರೂ ಈ ಮಾರ್ಗದಲ್ಲಿ ಎಲ್ಲೂ ಸ್ಪೀಡ್ ಬ್ರೇಕರುಗಳೇ ಇಲ್ಲ. ರೇಸ್ ಟ್ರ್ಯಾಕಿನಂತೆ ಈ ಮಾರ್ಗದಲ್ಲಿ ಬಸ್ ಚಾಲಕರು ಓಡಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕಾಗಿದೆ ಎಂದು ಅಂಗಡಿ ಮಾಲಕರು ಆಗ್ರಹಿಸುತ್ತಿದ್ದಾರೆ.