3500ಕ್ಕೂ ಹೆಚ್ಚು ಹೈಯರ್ ಸೆಕೆಂಡರಿ ಶಿಕ್ಷಕರಿಗೆ 3 ವರ್ಷದಿಂದ ಸಂಬಳವಿಲ್ಲ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಳೆದ ಮೂರು ವರ್ಷಗಳಿಂದ ಸುಮಾರು 3500ಕ್ಕೂ ಹೆಚ್ಚು ಅನುದಾನಿತ ಹೈಯರ್ ಸೆಕೆಂಡರಿ ಶಾಲೆ(ಎಚ್ ಎಸ್‍ಎಸ್)ಯ ಶಿಕ್ಷಕರು ಸಂಬಳವಿಲ್ಲದೆ ಯಾತನೆ ಅನುಭವಿಸುತ್ತಿದ್ದಾರೆ. ಸಂಬಳಕ್ಕಾಗಿ ಹಲವು ಹೋರಾಟಗಳು ನಡೆದರೂ ಈವರೆಗೂ ಯಾವುದೇ ಪರಿಣಾಮ ಬೀರಿಲ್ಲ. ಜೊತೆಗೆ ಹೈಯರ್ ಸೆಕೆಂಡರಿ ಶಿಕ್ಷಕರ ಈ ಸಮಸ್ಯೆಗೆ ಬೆನ್ನೆಲುಬಾಗಿ ಹೋರಾಟಕ್ಕೆ ಬೇರೆ ಬೆಂಬಲವೂ ಲಭ್ಯವಾಗುತ್ತಿಲ್ಲ.
ಕೇರಳ ಸರಕಾರ 2014-15ನೇ ಶೈಕ್ಷಣಿಕ ವರ್ಷದಲ್ಲಿ 400ಕ್ಕೂ ಹೆಚ್ಚು ಹೈಸ್ಕೂಲುಗಳನ್ನು ಮೇಲ್ದರ್ಜೆಗೇರಿಸಿದ್ದು, ಈ ಪೈಕಿ ಬಹುತೇಕ ಅನುದಾನಿತ ಹೈಸ್ಕೂಲುಗಳ ಆಡಳಿತ ಮಂಡಳಿಗಳು ಶಿಕ್ಷಕರನ್ನು ನೇಮಿಸಿ ತರಗತಿಗಳನ್ನು ಆರಂಭಿಸಿ 3 ವರ್ಷಗಳಾಗುತ್ತಾ ಬಂದಿದೆ. ಎಲ್ಲಾ ಶಾಲೆಗಳಲ್ಲೂ ಕಟ್ಟಡಗಳು ಪೂರ್ತಿಗೊಂಡಿದ್ದು, 200ರಿಂದ 250 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 2014ರಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು 2 ವರ್ಷ ಹೈಯರ್ ಸೆಕೆಂಡರಿ ವಿದ್ಯಾಭ್ಯಾಸ ಪೂರ್ತಿಗೊಳಿಸಿ ತೆರಳಿದ್ದಾರೆ. 2015ರಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಇನ್ನೇನು ವಿದ್ಯಾಭ್ಯಾಸ ಪೂರ್ತಿಗೊಳಿಸುವವರಿದ್ದಾರೆ. ಎಲ್ಲಾ ಪಠ್ಯೇತರ ಚಟುವಟಿಕೆಗಳು ಸರಕಾರದ ನಿರ್ದೇಶನದಂತೆ ಅಡೆತಡೆಯಿಲ್ಲದೆ ನಡೆಯುತ್ತಿದೆ. ಆದರೆ ಮೂರು ವರ್ಷಗಳಿಂದ ಅನುದಾನಿತ ಶಾಲೆಗಳಲ್ಲಿ ದುಡಿಯುತ್ತಿರುವ 3500ಕ್ಕೂ ಹೆಚ್ಚು ಹೈಯರ್ ಸೆಕೆಂಡರಿ ಶಿಕ್ಷಕರ ಸ್ಥಿತಿ ಶೋಚನೀಯವಾಗಿದೆ. 2014 ಸೆಪ್ಟಂಬರ್ ತಿಂಗಳಿಂದ ಒಂದು ರೂಪಾಯಿ ವೇತನ ನೀಡದೆ ಸರಕಾರ ಸತಾಯಿಸುತ್ತಿದೆ.
ಮೂರು ವರ್ಷಗಳಿಂದ ನಿರಂತರವಾಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಾ ವೇತನ ಮತ್ತು ಖಾಯಂ ನೇಮಕಾತಿಗಾಗಿ ಕಾಯುತ್ತಿರುವ ಶಿಕ್ಷಕರು ಆರ್ಥಿಕ ಭದ್ರತೆ, ಉದ್ಯೋಗದ ಭದ್ರತೆ ಇಲ್ಲದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ನಂಬಿ ಬಂದ ಉದ್ಯೋಗವನ್ನು ಬಿಡಲಾಗದೆ, ಬದುಕುವ ದಾರಿ ಕಾಣದೆ ಹತಾಶರಾಗಿದ್ದಾರೆ. ಹಲವು ಮುಷ್ಕರಗಳನ್ನು ನಡೆಸಿ, ರಾಜಕೀಯ ಮುಖಂಡರುಗಳನ್ನು ಕಂಡು, ಕಚೇರಿಗಳಿಗೆ ಅಲೆದು ಮುಂದೇನು ಎಂಬ ತೊಳಲಾಟ ಇವರಲ್ಲಿದೆ. ವೇತನ ನೀಡಬೇಕೆಂಬ ಕೋರ್ಟ್ ಆದೇಶವೂ ಮೂಲೆಗುಂಪಾಗಿದೆ. ರಾಜ್ಯದ ಎಲ್ಲ ಮಂತ್ರಿ, ಮುಖಂಡರಿಗೆ ಪತ್ರದ ಮೂಲಕ ವಿನಂತಿಸಿಕೊಂಡರೂ, ಪ್ರಧಾನಮಂತ್ರಿಗೆ ಪತ್ರ ಬರೆದರೂ ಯಾವುದಕ್ಕೂ ಸಮರ್ಪಕ ಉತ್ತರ ಈವರೆಗೆ ಲಭಿಸಿಲ್ಲ.