ಸಾಮೂಹಿಕ ರಾಜೀನಾಮೆ ಬೆದರಿಕೆಯೊಡ್ಡಿರುವ ಕಟೀಲು ಮೇಳದ 20ಕ್ಕೂ ಹೆಚ್ಚು ಕಲಾವಿದರು

ಆಡಳಿತದ ನಿರ್ಧಾರ ವಿರುದ್ಧ ಅಸಮಾಧಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜನಪ್ರಿಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದ ಈ ಋತುವಿನ ತಿರುಗಾಟ ಇನ್ನೇನು ಆರಂಭವಾಗಬೇಕೆನ್ನುವಾಗ ಮೇಳದ 20ಕ್ಕೂ ಹೆಚ್ಚು ಕಲಾವಿದರು ಬಂಡಾಯದ ಕಹಳೆಯೂದಿ ಸಾಮೂಹಿಕವಾಗಿ ಮೇಳದಿಂದ ಹೊರಬರುವ ಎಚ್ಚರಿಕೆ ನೀಡಿದ್ದಾರೆ. ಕಲಾವಿದರನ್ನು, ಮುಖ್ಯವಾಗಿ ಭಾಗವತರನ್ನು ಸರತಿಯಂತೆ ತನ್ನ ಆರು ತಂಡಗಳಲ್ಲಿ ಸೇವೆ ಸಲ್ಲಿಸುವಂತೆ ಮಾಡುವ ಆಡಳಿತದ ನಿರ್ಧಾರ ಕಲಾವಿದರಲ್ಲಿ ಅಸಹನೆ ಮೂಡಿಸಿದೆ. ಹಲವು ಕಲಾವದರು ಸಿಡಿದೆದ್ದಿದ್ದರೂ ಈ ಋತುವಿನ ತಿರುಗಾಟವನ್ನು ತಂಡಗಳ ಸಂಖ್ಯೆಯನ್ನು ಇಳಿಸದೆ ನವೆಂಬರ್ 13ರಿಂದ ನಡೆಸಲು ಮೇಳದ ಆಡಳಿತ ನಿರ್ಧರಿಸಿದೆ.

ಕಟೀಲು ಮೇಳದ ಐದನೇ ತಂಡದ ಒಟ್ಟು 23 ಕಲಾವಿದರು ಗುರುವಾರ ಸಭೆ ಸೇರಿ ಆಡಳಿತದ ನಿಯಮವನ್ನು ವಿರೋಧಿಸಿದ್ದಾರೆ. ನವೆಂಬರ್ 9ರಂದು ಅವರು ತಂಡಗಳ ಸಂಚಾಲಕರಿಗೆ ಪತ್ರ ಬರೆದು ಭಾಗವತರುಗಳಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಶ್ರೀನಿವಾಸ್ ಬಳ್ಳಮಂಜ ಅವರನ್ನು ಇತರ ತಂಡಗಳಿಗೆ ವರ್ಗಾಯಿಸುವುದನ್ನು ವಿರೋಧಿಸಿದ್ದಾರೆ. ತಮ್ಮ ತಂಡಕ್ಕೆ ಅತೀ ಹೆಚ್ಚು ಬೇಡಿಕೆಯಿರುವುದರಿಂದ ಶೆಟ್ಟಿ ಅವರ ಮಾರ್ಗದರ್ಶನ ತಮಗೆ ಅತೀ ಮುಖ್ಯ ಎಂದು ಹೇಳಿರುವ ಈ ಕಲಾವಿದರು ತಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಇದೇ ಪತ್ರವನ್ನು ತಮ್ಮ ರಾಜೀನಾಮೆ ಪತ್ರವೆಂದು ಪರಿಗಣಿಸುವಂತೆ ಹೇಳಿದ್ದಾರೆ.

ಕೆಲವು ಕಲಾವಿದರ ವಿರೋಧದ ಹಿಂದೆ ಲಾಬಿಯೊಂದು ಕೆಲಸ ಮಾಡಿದೆಯೆಂದು ತೋರುತ್ತಿದೆಯೆಂದು ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಕಲಾವಿದರನ್ನು ಸರತಿಯಂತೆ ತಮ್ಮ ಮೇಳದ ಬೇರೆ ಬೇರೆ ತಂಡಗಳಿಗೆ ಕಳುಹಿಸುವುದು ವಾಡಿಕೆಯಾಗಿದೆ. ಈ ಹಿಂದೆ ಕೂಡ ಹೀಗೆ ಮಾಡಲಾಗಿದೆ ಎಂದರು. ಆಡಳಿತ ಇಂತಹ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ. ರಾಜೀನಾಮೆ ನೀಡುವ ಬೆದರಿಕೆ ಹಾಕಿರುವ ಕಲಾವಿದರ ಸ್ಥಾನಗಳಿಗೆ ಬೇರೆ ಕಲಾವಿದರನ್ನು ಹಾಕಲು ಏರ್ಪಾಟು ಮಾಡಲಾಗಿದೆ. ಮತ್ತೆ ಹಿಂದೆ ಬರುವವರು ಬರಬಹುದು ಆದರೆ ಈ ಬಂಡಾಯದಲ್ಲಿ ಮುಂಚೂಣಿಯಲ್ಲಿದ್ದವರನ್ನು ಮರು ಸೇರಿಸುವ ಬಗ್ಗೆ ಯೋಚಿಸಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮೇಳದ ಎಲ್ಲಾ ತಂಡಗಳೂ ಸಮಾನ, ವ್ಯಕ್ತಿಗಿಂತ ಕಲೆ ದೊಡ್ಡದು, ದೇವಿ ಮಹಾತ್ಮೆ ಬಹಳ ಜನಪ್ರಿಯವಾಗಿದ್ದು, ಅದಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಚರ್ಚೆಯಾಗುತ್ತಿದೆ.