ಆ್ಯಕ್ಸಿಸ್ ಬ್ಯಾಂಕಲ್ಲಿ 40 ನಕಲಿ ಖಾತೆ ತೆರೆದು 100 ಕೋಟಿ ರೂಪಾಯಿಗೂ ಅಧಿಕ ಜಮೆ

ಸಾಂದರ್ಭಿಕ ಚಿತ್ರ

ನವದೆಹಲಿ : ಐನೂರು ಮತ್ತು ಸಾವಿರದ ನೋಟು ನಿಷೇಧವಾದ ಬಳಿಕ ದೆಹಲಿಯ ಚಾಂದ್ನಿ ಚೌಕಿನಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಬ್ರಾಂಚಿನಲ್ಲಿ 40 ನಕಲಿ ಖಾತೆ ತೆರೆದು 100 ಕೋಟಿ ರೂ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ ಎಂದು ಗುರುವಾರ ಮತ್ತು ಶುಕ್ರವಾರ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ 100 ಕೋಟಿ ರೂ ಪತ್ತೆಯಾಗಿದ್ದರೂ, ಒಟ್ಟು ಮೊತ್ತ ಎಷ್ಟೆಂಬುದರ ಅಧಿಕೃತ ವಿವರ ಇನ್ನಷ್ಟೇ ಸಿಗಬೇಕಿದೆ ಎಂದು ಅಧಿಕಾರಿಗಳು ಹೇಳಿದರು.

ಮೊನ್ನೆ ಕೋಟು ಧರಿಸಿದ್ದ ಮೂರು ಮಂದಿ ಬ್ಯಾಂಕಿನೊಳಗೆ ಪ್ರವೇಶಿಸಿದ್ದು, ಬಳಿಕ ಬ್ಯಾಂಕ್ ಬ್ರಾಂಚಿನ ಬಾಗಿಲು ಮುಚ್ಚಿದ್ದರು. ಸ್ವಲ್ಪ ಸಮಯದ ಬಳಿಕ ಮಹಿಳಾ ಸಿಬ್ಬಂದಿ ಹೊರಗೆ ಹೋಗಲು ಮಾತ್ರ ತಾತ್ಕಾಲಿಕವಾಗಿ ಬಾಗಿಲು ತೆರೆಯಲಾಗಿತ್ತು. ಬ್ಯಾಂಕಿನ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯು ತಡರಾತ್ರಿಯವರೆಗೂ ಬ್ಯಾಂಕಿನೊಳಗೆಯೇ ಇದ್ದು, ವಿಚಾರಣೆಗೊಳಪಟ್ಟಿದ್ದರು ಎಂದು ಆ ಪ್ರದೇಶದ ಅಂಗಡಿ ಮಾಲಕರು ಹೇಳಿದರು.

ಶುಕ್ರವಾರದಂದು ಅಪರಾಹ್ನ ಒಂದರಿಂದ 3.30ರವರೆಗೆ ಗ್ರಾಹಕರಿಗಾಗಿ ಬ್ಯಾಂಕ್ ಶಾಖೆ ತೆರೆದುಕೊಂಡಿತ್ತು. ಆದರೆ ಬ್ಯಾಂಕಿನೊಳಗೆ ನಿನ್ನೆ ಸಂಜೆವರೆಗೂ ಐಟಿ ಅಧಿಕಾರಿಗಳು ಉಳಿದುಕೊಂಡು, ಪರಿಶೀಲನೆ ಮುಂದುವರಿಸಿದ್ದರು.