ಕಿನ್ನಿಗೋಳಿ ಮನೆ -ಮನೆ ಕಾಂಗ್ರೆಸ್ ಅಭಿಯಾನಕ್ಕೆ ನಿರುತ್ಸಾಹ ತೋರಿಸುವವರ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಬ್ಲಾಕ್ ವತಿಯಿಂದ ಮನೆಮನೆಗೆ ಕಾಂಗ್ರೆಸ್ ಅಭಿಯಾನ ನಡೆಯುತ್ತಿದ್ದರೂ ಕೆಲ ಕಾಂಗ್ರೆಸ್ ಹಿರಿಯ ನಾಯಕರು ಗೈರಾಗುತ್ತಿರುವ ಬಗ್ಗೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದು, ಹೈಕಮಾಂಡಿಗೆ ದೂರು ನೀಡಲು ನಿರ್ದರಿಸಿದ್ದಾರೆ.

ಕಿನ್ನಿಗೋಳಿಯಲ್ಲಿ ಅಭಿಯಾನ ಉತ್ಸಾಹದಿಂದ ನಡೆಯುತ್ತಿದ್ದು, ಪಕ್ಷಿಕೆರೆ, ಕಟೀಲು ವಲಯದ ಕಾಂಗ್ರೆಸ್ ನಾಯಕರು ಗೈರಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರ್ಯಕರ್ತರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಟೀಲು ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಸಹಿತ ಪಕ್ಷಿಕೆರೆಯ ಕೆಪಿಸಿಸಿ ಸದಸ್ಯ ಹಾಗೂ ಕಿಲ್ಪಾಡಿ ಪಂಚಾಯತಿ ಸದಸ್ಯರೊಬ್ಬರು ಮಂಗಳೂರಿನ ನಾಯಕರೊಬ್ಬರೊಡನೆ ಸೇರಿಕೊಂಡು ಪಕ್ಷದಲ್ಲಿ ಭಿನ್ನಮತ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಿನ್ನಿಗೋಳಿ ಪರಿಸರದಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಮನೆಮನೆ ಅಭಿಯಾನ ಆಮೆಗತಿಯಲ್ಲಿ ಸಾಗುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ನೇತೃತ್ವದಲ್ಲಿ ಚುರುಕು ಮುಟ್ಟಿಸುವ ಕೆಲಸವಾಗುತ್ತಿದೆ. ಆದರೆ ಪಕ್ಷದಿಂದ ಎಲ್ಲಾ ಸವಲತ್ತುಗಳನ್ನು ಪಡೆದು ಕಟೀಲು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆರೊಬ್ಬರು ಪಕ್ಷವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕೂಡಲೇ ಮುಲ್ಕಿ ಶಾಸಕರು ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನಿಷ್ಠಾವಂತ ಕಾರ್ಯಕರ್ತರು ಆಗ್ರಹಿಸಿದ್ದಾರೆ.