ಜಾತಿ, ಧರ್ಮ ಮರೆತು ಹಿಂದೂ ಅಂತ್ಯಕ್ರಿಯೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಳೆದ 40 ವರ್ಷಗಳಿಂದ ನೀರುಮಾರ್ಗದ ಪಡು ಬಿತ್ತಪಾದೆ ಪರಿಸರದಲ್ಲಿ ಮೂರ್ತೆದಾರಿಕೆ ನಡೆಸಿಕೊಂಡು ಬಂದಿದ್ದ ಅನಾಥ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸ್ಥಳೀಯರು ಜಾತಿ, ಧರ್ಮ, ಬೇಧ ಮರೆತು ಎಲ್ಲರೂ ಒಟ್ಟಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.

ಕಾರಣಾಂತರಗಳಿಂದ ಮನೆಯವರಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದ ಪರಮೇಶ್ವರ್ ಪೂಜಾರಿ ಕಳೆದ ಎರಡು ತಿಂಗಳಿನಿಂದ ಅಸೌಖ್ಯದಿಂದಿದ್ದು, ಬಸ್ ತಂಗುದಾಣವನ್ನು ಆಶ್ರಯಿಸಿಕೊಂಡಿದ್ದರು.

ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಇವರನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಭಾನುವಾರ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯ ಹೊಣೆಗಾರಿಕೆಯನ್ನೂ ಇಲ್ಲಿನ ಮುಸ್ಲಿಮರೇ ವಹಿಸಿಕೊಂಡು ಮಾನವೀಯತೆ ಮೆರೆದರು.

ಆಸ್ಪತ್ರೆಯ ಶವಾಗಾರದಲ್ಲಿ ಪರಮೇಶ್ವರ್ ಕುಟುಂಬದವರು ಹಾಜರಾದ ಬಳಿಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಮುಸ್ಲಿಂ ಯುವಕರು ತಾವೇ ಹೆಣವನ್ನು ಹೆಗಲು ಮೇಲೆ ಹೊತ್ತುಕೊಂಡು ಬೋಳೂರು ರುದ್ರಭೂಮಿಗೆ ತೆರಳಿದರು. ಮೃತದೇಹಕ್ಕೆ ಹಿಂದೂ ಸಂಪ್ರದಾಯದ ಪ್ರಕಾರವೇ ತುಳಸಿ ಎಲೆಯಲ್ಲಿ ಎಳ್ಳುನೀರು ಬಿಟ್ಟರು.

40 ವರ್ಷಗಳ ಹಿಂದೆ ಮನೆ ಬಿಟ್ಟು ಬಂದಿದ್ದ ಅವರು ಬಿತ್ತಪಾದೆಯಲ್ಲಿ ಕೆಲಸ ಮಾಡಿಕೊಂಡಿದ್ದರು. “ನೀವು ಮನೆಗೆ ಬನ್ನಿ, ನಾವು ನಿಮ್ಮನ್ನು ನೋಡಿಕೊಳ್ತೇವೆ ಎಂದರೂ ಮನೆಗೆ ಬಂದಿಲ್ಲ. ಆದರೆ ಜಾತಿ, ಧರ್ಮ ಬಿಟ್ಟು, ಮಾನವೀಯತೆಯಿಂದ ಅವರನ್ನು ಅಷ್ಟು ಜೋಪಾನವಾಗಿ ನೋಡಿದ ಇಲ್ಲಿನ ಯುವಕರ ಕಾರ್ಯ ಶ್ಲಾಘನೀಯ. ಅವರಿಗೆ ನಾವೆಷ್ಟೇ ಧನ್ಯವಾದ ಹೇಳಿದರೂ ಅದು ಕಡಿಮೆಯೇ” ಎಂದು ಮೃತರ ಪುತ್ರ ವಿಠಲ್ ಹೇಳಿದರು.