ಸಂಘಟನಾತ್ಮಕ ಹೋರಾಟದಿಂದ ಸನ್ ರೈಸರ್ಸ್ ಗಿಟ್ಟಿಸಿದ ಜಯ

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಪಂದ್ಯದಿಂದ ಪಂದ್ಯಕ್ಕೆ ಬ್ಯಾಟಿಂಗ್ ಜತೆಗೆ ಬೌಲಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಬುಧವಾರ ತವರು ನೆಲದಲ್ಲಿ ನಡೆದ ಹತ್ತನೇ ಐಪಿಎಲ್ ಪಂದ್ಯಾಟದ 21ನೇ ಪಂದ್ಯದಲ್ಲಿ  ಮತ್ತೊಂದು ರೋಚಕ ಗೆಲುವನ್ನು ದಾಖಲಿಸಿಕೊಂಡಿದೆ. ಡೆಲ್ಲಿ ಡೇರ್ ಡೆವಿಲ್ಸ್  ವಿರುದ್ಧ ನಡೆದ ಈ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿತ್ತು.

ಹೈದರಾಬಾದಿನ ರಾಜೀವ್ ಗಾಂಧಿ ಇಂಟರನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಇತ್ತಂಡಗಳು ಜಯಕ್ಕಾಗಿ ಸೆಣಸಾಟ ನಡೆಸಿದರೂ ಗೆಲುವಿನ ನಗೆಯನ್ನು ಬೀರಿದ್ದು ಸನ್ ರೈಸರ್ಸ್ ಹೈದರಾಬಾದ್ ತಂಡ. ಆರಂಭಿಕ ಎರಡು ಪಂದ್ಯಗಳಲ್ಲಿ  ಗೆದ್ದ ನಂತರ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಸನ್ ರೈಸರ್ಸ್ ತಂಡ ಏಪ್ರಿಲ್ 17ರಂದು ನಡೆದ  ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸವಾಲನ್ನು ದಿಟ್ಟವಾಗಿ ಎದುರಿಸಿ 5 ರನ್À ರೋಮಾಂಚನಕಾರಿ ಜಯವನ್ನು ಪಡೆದಿತ್ತು. ಈಗ ಅಂತಹದೇ ಮತ್ತೊಂದು ಗೆಲುವು ಸನ್ ರೈಸರ್ಸ್ ತಂಡದ  ಪಾಲಾಗಿದೆ.

ಈ ಪಂದ್ಯದಲ್ಲಿ ನ್ಯೂಜಿಲೆಂಡಿನ ಕೆನ್ ವಿಲಿಯಮ್ಸನ್ (89 ರನ್) ಭರ್ಜರಿಯಾಗಿಯೇ ಬ್ಯಾಟ್ ಬೀಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಆಡಿದ ಇವರು ಶಿಖರ್ ಧವನ್ (70 ರನ್) ಜೊತೆಗೂಡಿ ಎರಡನೇ ವಿಕೆಟ್ ಗೆ 136 ರನ್ ಸೇರಿಸಿದ್ದರು. ಪಂದ್ಯದಲ್ಲಿ ವಿಲಿಯಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು.

ಈ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತನ್ನ ಹಳೆಯ  ಚಾಳಿಯನ್ನೇ ಮುಂದುವರಿಸಿದೆ.  ಅಸ್ಥಿರತೆಯಿಂದ ಕೂಡಿದ ಬ್ಯಾಟಿಂಗಿನಿಂದಾಗಿ ಡೆಲ್ಲಿ ಡೇರ್ ಡೆವಿಲ್ಸ್ ಗೆಲ್ಲಬಹುದಾದ ಪಂದ್ಯಗಳನ್ನು ಸೋಲುತ್ತಿದೆ. 192 ರನ್‍ಸವಾಲನ್ನು ಸ್ವೀಕರಿಸುವ ಆಟಗಾರರು ಡೆಲ್ಲಿ ತಂಡದಲ್ಲಿದ್ದಾರೆ. ಆದರೆ ,  ಆಟಗಾರರು ಎಷ್ಟೇ ಪ್ರಬುದ್ಧರಾಗಿದ್ಧರೂ ಪಂದ್ಯವನ್ನು ಗೆಲ್ಲಿಸುವ ಚಮತ್ಕಾರಿ ಬ್ಯಾಟಿಂಗ್ ನಡೆಸುವಲ್ಲಿ ಈಚೆಗೆ ವಿಫಲರಾಗುತ್ತಿದ್ದಾರೆ.

ಡೆಲ್ಲಿ ತಂಡದ ಪರ ಪ್ರತಿಭ್ವಾನಿತ ಆಟಗಾರರಾದ ಶ್ರೇಯಸ್ ಐಯರ್ (50 ರನ್),ಸಂಜು ಸ್ಯಾಮ್ಸನ್ (42 ರನ್), ಕರುಣ್ ನಾಯರ್ (32 ರನ್)  ಈ ಪಂದ್ಯದಲ್ಲಿ  ಭರವಸೆಯ ಆಟವಾಡಿದ್ದಾರೆ. ಆದರೆ, ಪಂದ್ಯ ಗೆಲ್ಲಿಸುವ ಆಟ ಇವರಿಂದ ಬರಲಿಲ್ಲ.

ಹಾಲಿ ಚಾಂಪಿಯನ್ ಆಗಿರುವ ಸನ್ ರೈಸರ್ಸ್ ಹೈದರಾಬಾದ್ ಈ ಗೆಲುವಿನ ನಂತರ ಮತ್ತಷ್ಟೂ ಬಲಾಡ್ಯತೆಯನ್ನು ಕಾಣುತ್ತಿದೆ. ಡೇವಿಡ್ ವಾರ್ನರ್ ಸಾರಥ್ಯದಲ್ಲಿ ಈಗ ಅಂಕ ಪಟ್ಟಿಯಲ್ಲಿ ಸನ್ ರೈಸರ್ಸಗೆ ದ್ವಿತೀಯ ಸ್ಥಾನ. ಪ್ರಸ್ತುತ ಪಂದ್ಯಾಟದಲ್ಲಿ ಗರಿಷ್ಠ ರನ್ ಹಾಗೂ ಗರಿಷ್ಠ ವಿಕೆಟ್ ಪಟ್ಟಿಯಲ್ಲಿ ಡೇವಿಡ್ ವಾರ್ನರ್ (239 ರನ್)  ಮತ್ತು  ಭುವನೇಶ್ವರ್ ಕುಮಾರ್ (15 ವಿಕೆಟ್) ಅಗ್ರಸ್ಥಾನವನ್ನು ಪಡೆದಿದ್ದು ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಂತೂ ಡೆಲ್ಲಿ ಡೇರ್ ಡೆವಿಲ್ಸ್ ಬ್ಯಾಟಿಂಗಿನಲ್ಲಿ  ಸಮತೋಲಿತ ಪ್ರದರ್ಶನ ನೀಡದ ಹೊರತು ಮತ್ತೆ ಜಯದ ಹಳಿಗೆ ಮರಳಲು ಖಂಡಿತ ಸಾಧ್ಯವಿಲ್ಲ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟದೊಂದಿಗೆ 15 ರನ್ ಗೆಲುವನ್ನು ಹೈದರಾಬಾದ್ ತಂಡ ಪಡೆದುಕೊಂಡಿದೆ ಎಂದು ನಾಯಕ ಡೇವಿಡ್ ವಾರ್ನರ್ ಹೇಳಿಕೊಂಡಿದ್ದಾರೆ.