ಭೀಮಗಡ ಅರಣ್ಯದಲ್ಲಿ ವಿದ್ಯುತ್ ತಂತಿ ಎಳೆಯುವ ಕಾರ್ಯಕ್ಕೆ ವ್ಯಾಪಕ ವಿರೋಧ

ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್ (ಹೆಸ್ಕಾಂ) ಅಧಿಕಾರಿಗಳು  ಬೆಳಗಾವಿ ಜಿಲ್ಲೆಯ ಭೀಮಗಡ ವನ್ಯ ಪ್ರಾಣಿ ಧಾಮದೊಳಗಿನ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ತಂತಿಯನ್ನು ಎಳೆಯುತ್ತಿದ್ದು ಇದು  ನಿಯಮಗಳ ಉಲ್ಲಂಘನೆಯಾಗಿದೆಯಲ್ಲದೆ ಸಂಸ್ಥೆ ಈ ಕಾರ್ಯಕ್ಕಾಗಿ ರಾಜ್ಯ ಅಥವಾ ಕೇಂದ್ರ ಸರಕಾರಗಳಿಂದ ಅನುಮತಿ ಕೂಡ ಪಡೆದಿಲ್ಲವೆಂದು ತಿಳಿದು ಬಂದಿದೆ.

ದೇಗಾಂವ್-ತಾಲೇವಾಡಿಯಿಂದ ಖಾನಾಪುರ ತಾಲೂಕಿನ ಕೃಷ್ಣಾಪುರದ ತನಕ 23 ಕಿಮೀ ದೂರ ವಿದ್ಯುತ್ ತಂತಿ ಎಳೆಯಲು  ರೂ 28 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದ್ದು  ಬೋರ್ವೆಲ್ ಗಳಿಂದ ನೀರೆತ್ತಲು ಹಾಗೂ  ಕೃಷಿ ಉದ್ದೇಶಕ್ಕೆ ನೀರುಣಿಸಲು ಈ ವಿದ್ಯುತ್ತನ್ನು ಉಪಯೋಗಿಸಲಾಗುವುದೆಂದು ಹೇಳಲಾಗುತ್ತಿದೆ.

ವಿದ್ಯುತ್ ತಂತಿ ಹಾದು ಹೋಗುವೆಡೆಗಳಲ್ಲಿ ವಾಸವಾಗಿರುವ ಜನರು ಮಾತ್ರ ತಮಗೆ ಸೂಕ್ತ ಪರಿಹಾರ ನೀಡಿದಲ್ಲಿ ತಾವು ಬೇರೆಡೆ ಸ್ಥಳಾಂತರಗೊಳ್ಳುವುದಾಗಿ ಹೇಳುತ್ತಿದ್ದಾರೆ.  ಇಲ್ಲಿ ಗಮನಿಸಬೇಕಾದ  ಅಂಶವೆಂದರೆ ಈ ಗ್ರಾಮಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರುತ್ತಿದ್ದು ಅಲ್ಲಿ ಮಹದಾಯಿ ನದಿ ಮತ್ತಿತರ ತೊರೆಗಳಿಂದ ಸಾಕಷ್ಟು ನೀರಿನ ಸೌಲಭ್ಯವಿದೆ.

ಈ ವಿದ್ಯುತ್ ತಂತಿ ಎಳೆಯುವ ಯೋಜನೆಯನ್ನು ವಿರೋಧಿಸಿ ಅರಣ್ಯ ಇಲಾಖೆಯಿಂದ ಕನಿಷ್ಠ  ನಾಲ್ಕು ಪತ್ರಗಳು ಹೆಸ್ಕಾಂಗೆ ತಲುಪಿದ ಹೊರತಾಗಿಯೂ ಸಂಸ್ಥೆ  ತನ್ನ ಕಾರ್ಯವನ್ನು ಮುಂದುವರಿಸಿದ್ದು ಈಗಾಗಲೇ  5 ಕಿಮೀ ದೂರದ ತನಕ ವಿದ್ಯುತ್ ತಂತಿಗಳನ್ನು ಎಳೆಯಲಾಗಿದೆ.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವನ್ಯ ಪ್ರಾಣಿ ಮಂಡಳಿ ಸಭೆಯಲ್ಲೂ ವಿದ್ಯುತ್ ತಂತಿ ಎಳೆಯುವ ಯೋಜನೆಗೆ ಅನುಮತಿ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹದಾಗಿದೆ.

ಇದೀಗ ಅರಣ್ಯ ಇಲಾಖೆ ಹೆಸ್ಕಾಂಗೆ ನೋಟಿಸ್ ಜಾರಿ ಮಾಡಿದ್ದು ಈ ಯೋಜನೆಗಾಗಿ ಅದು ಕೇಂದ್ರ ಪರಿಸರ ಸಚಿವಾಲಯ ಹಾಗೂ ರಾಜ್ಯ ಅರಣ್ಯ ಇಲಾಖೆಯಿಂದ ಪಡೆದಿರುವ ಅನುಮತಿ ಬಗ್ಗೆ ದಾಖಲೆಯೊದಗಿಸುವಂತೆ ಹೇಳಿದೆ, ಎಂದು ಬೆಳಗಾವಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ರಾಜ್ ಹೇಳಿದ್ದಾರೆ.

ಅರಣ್ಯ ಇಲಾಖೆ  ಈಗಾಗಲೇ ಎಫ್ ಐ ಆರ್ ದಾಖಲಿಸಿದ್ದು  ನಿಯಮ ಉಲ್ಲಂಘಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಅರಣ್ಯ ಪ್ರದೇಶದೊಳಗೆ ಕೆಲವು ಶ್ರೀಮಂತರು ನಿರ್ಮಿಸಿರುವ ರಿಸಾರ್ಟ್ ಗಳಿಗೆ ವಿದ್ಯುತ್ ಒದಗಿಸುವ ಉದ್ದೇಶವೂ ಈ ಯೋಜನೆಯ ಹಿಂದೆ ಇದ್ದಿರಬಹುದೆಂದು ಪರಿಸರವಾದಿಯೊಬ್ಬರು ಶಂಕಿಸಿದ್ದಾರೆ.