ಕರಾವಳಿಯಲ್ಲಿ ನಿರ್ಮಿಸಲುದ್ದೇಶಿಸಲಾದ ಜಲಾಶಯ ಯೋಜನೆಗೆ ಪರಿಸರವಾದಿಗಳ ವಿರೋಧ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೇತ್ರಾವತಿ ನದಿ ಹಾಗೂ ಹಸಿರು ಪರಿಸರಕ್ಕೆ ಹಾನಿಕಾರಕವೆನ್ನಲಾದ ಬೆಂಗಳೂರು ಮತ್ತು ಮಂಗಳೂರಿಗೆ ನೀರು ಪಂಪ್ ಮಾಡಲೋಸುಗ ಕರಾವಳಿ ಪ್ರದೇಶದಲ್ಲಿ ನಿರ್ಮಿಸಲುದ್ದೇಶಿಸಲಾದ ಜಲಾಶಯ ಪ್ರಸ್ತಾವವೊಂದಕ್ಕೆ ಕರಾವಳಿ ಜಿಲ್ಲೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಈ ಪ್ರಸ್ತಾವ ಸರ್ಕಾರದ ಮುಂದಿಟ್ಟಿದ್ದಾರೆ.

ಐಐಎಸ್ಸಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರೊಫೆಸರ್ ಸೀತಾರಾಮ ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜರಿಗೆ ಸಲ್ಲಿಸಿದ ಪ್ರಸ್ತಾವದಲ್ಲಿ ಈ ವಿಷಯ ಉಲ್ಲೇಖಿಸಿದ್ದಾರೆ. 20ರಿಂದ 30 ಟಿಎಂಸಿ ಅಡಿ ನೀರು ಶೇಖರಣೆ ಸಾಮಥ್ರ್ಯದ ಕರಾವಳಿ ಜಲಾಶಯವೊಂದು ನಿರ್ಮಿಸಿದರೆ ಬೆಂಗಳೂರು ಮತ್ತು ಮಂಗಳೂರಿಗರ ಕುಡಿಯುವ ನೀರಿನ ಬೇಡಿಕೆ ಪೂರೈಸಲು ಸಾಧ್ಯವಿದೆ. ಇದನ್ನು ಸಮುದ್ರದಲ್ಲಿ ಮೂರು ಅಥವಾ ನಾಲ್ಕು ಕಿ ಮೀ ಅಂತರದಲ್ಲಿ ನಿರ್ಮಿಸಬೇಕೆಂದು ಅವರು ಪ್ರಸ್ತಾವಿಸಿದ್ದಾರೆ.

ಆದರೆ ಈ ಯೋಜನೆಯಿಂದ ಭವಿಷ್ಯದಲ್ಲಿ ಪರಿಸರದ ಮೇಲೆ ಪ್ರತೀಕೂಲ ಪ್ರಭಾವ ಬೀರಲಿದೆ ಎಂದು ಪರಿಸರವಾದಿಗಳು ಮತ್ತು ಎನ್ಜಿಒಗಳು ಭೀತಿ ವ್ಯಕ್ತಪಡಿಸಿವೆ.

“ಸಮುದ್ರ ಬಳಿ ಜಲಾಶಯ ನಿರ್ಮಿಸುವ ಈ ಯೋಜನೆಗಾಗಿ ಮರ ಕಡಿಯಬೇಕಾಗಿಲ್ಲ ; ಸಮುದ್ರ ಬದಿಯ ನಿವಾಸಿಗರ ಸ್ಥಳಾಂತರ ಮಾಡಬೇಕಾಗಿಲ್ಲ. ನದಿ ನೀರು ತಿರುಗಿಸುವ ಅವಶ್ಯಕತೆ ಇಲ್ಲ” ಎಂದಿದ್ದಾರೆ ಸೀತಾರಾಮ.

ಆದಾಗ್ಯೂ ಎತ್ತಿನಹೊಳೆ ಯೋಜನೆ ವಿರೋಧಿ, ಪರಿಸರವಾದಿ ದಿನೇಶ್ ಹೊಳ್ಳ ಕರಾವಳಿ ಜಲಾಶಯ ಯೋಜನೆಯನ್ನೂ ವಿರೋಧಿಸಿದ್ದಾರೆ. ಸಮುದ್ರದಲ್ಲಿ ಜಲಾಶಯ ನಿರ್ಮಿಸುವುದರಿಂದ ನೀರಿನ ಸಹಜ ಆವರ್ತನೆ ಮೇಲೆ ಪರಿಣಾಮ ಬೀರಲಿದೆ. ತತ್ಪರಿಣಾಮವಾಗಿ ಸಮುದ್ರ ಜೀವಿಗಳಿಗೆ, ಮುಖ್ಯವಾಗಿ ಮೀನಿನ ಸಂತತಿಗೆ ತೊಂದರೆಯುಂಟಾಗಲಿದೆ. ಯೋಜನೆಗೆ ಬಳಕೆಯ ವಿದ್ಯುತ್ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ನಾವು ಯೋಜನೆಯ ಸಮಗ್ರ ಚಿತ್ರಣಕ್ಕಾಗಿ ಕಾಯುತ್ತಿದ್ದೇವೆ. ಯೋಜನೆ ವಿಷಯದಲ್ಲಿ ಈಗಾಗಲೇ ಸಮಾನ ಮನಸ್ಕ ಸಂಘಟನೆಗಳು ಮತ್ತು ಇತರ ಕೆಲವರಲ್ಲಿ ಚರ್ಚಿಸಲಾಗಿದೆ” ಎಂದು ಹೊಳ್ಳ ತಿಳಿಸಿದ್ದಾರೆ. ಈ ಯೋಜನೆಯನ್ನು ಪರಿಸರ ಕಾರ್ಯಕರ್ತ ನಿರಂಜನ ರೈ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.