`ನ್ಯಾಯಕ್ಕಾಗಿ ಹೋರಾಡುವಾಗ ವಿರೋಧ ಸಾಮಾನ್ಯ ಸಂಗತಿ’

ನಿರಂಜನ್ ಶಣ್ಮುಗನಾಥನ್

“ಪೆಟಾ ಒಂದು ಸಸ್ಯಾಹಾರ ಪ್ರಚೋದಿಸುವ ಸಂಘಟನೆ. ವಿಶ್ವಾದ್ಯಂತ ನಾವು ಹಸುವಿನ ಹಾಲಿನ ಬದಲು ತೆಂಗಿನ ಹಾಲು, ಬಾದಾಮಿ ಹಾಲು ಮತ್ತು ಸಸ್ಯಾಧಾರಿತ ಪೇಯವನ್ನು ಬಳಸಲು ಉತ್ತೇಜಿಸುತ್ತೇವೆ.”

ತಮಿಳುನಾಡಿನ ಪಾರಂಪರಿಕ ಕ್ರೀಡೆ ಜಲ್ಲಿಕಟ್ಟು ನಿಷೇಧವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರವಾಗುತ್ತಿದ್ದು ರಾಜ್ಯಾದ್ಯಂತ ಹೆಚ್ಚು ಹೆಚ್ಚು ಯುವಕರು ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಚೆನ್ನೈನ ಮರೀನಾ ಬೀಚಿನಲ್ಲಿ ಜನವರಿ  18ರಂದು ಸೇರಿದ್ದ ಪ್ರತಿಭಟನಾ ಸಭೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚುಜನ ಪಾಲ್ಗೊಂಡಿದ್ದು ಸುಪ್ರೀಂ ಕೋರ್ಟ್ ನಿಷೇಧವನ್ನು ಕೂಡಲೇ ತೆರವು ಮಾಡುವಂತೆ ಕೋರಿದ್ದಾರೆ. ಮಧುರೈ ಬಳಿ ಇರುವ ಅಲ್ಲಂಗನಲ್ಲೂರಿನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ವ್ಯಾಪಕವಾಗಿ ಹರಡುತ್ತಿದೆ. ತಮಿಳುನಾಡಿನ ಸಂಸ್ಕøತಿಯನ್ನು ರಕ್ಷಿಸುವ ಸಲುವಾಗಿ ಜಲ್ಲಿಕಟ್ಟು ಕ್ರೀಡೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ. ಜಲ್ಲಿಕಟ್ಟು ನಿಷೇಧವನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು, ನಿಷೇಧಕ್ಕೆ ಮೂಲ ಕಾರಣವಾದ `ಪೆಟಾ’ ಸಂಘಟನೆಯನ್ನು ನಿಷೇಧಿಸುವಂತೆಯೂ ಆಗ್ರಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪೀಪಲ್ ಫಾರ್ ಎತಿಕಲ್ ಟ್ರೀಟ್‍ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಂಘಟನೆಯ ಸದಸ್ಯ ನಿರಂಜನ್ ಶಣ್ಮುಗನಾಥನ್ ಅವರೊಡನೆ ಸಂದರ್ಶನದ ಸಾರಾಂಶ :

  • ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪೆಟಾ ಸಂಘಟನೆಯನ್ನು ನಿಷೇಧಿಸಲು ಆಗ್ರಹ ಹೆಚ್ಚಾಗಿ ಕೇಳಿಬರುತ್ತಿದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ ?

ನಾನೂ ಒಬ್ಬ ತಮಿಳನೇ. ಇಲ್ಲಿಯೇ ಹುಟ್ಟಿ ಬೆಳೆದು 30 ವರ್ಷ ಬಾಳಿದ್ದೇನೆ. ಕಳೆದ 13 ವರ್ಷಗಳಿಂದ ಪೆಟಾ ಸಂಘಟನೆಯಲ್ಲಿದ್ದೇನೆ. ಮಾನವೀಯತೆಯ ನೆಲೆಯಲ್ಲಿ ನಮ್ಮ ಚಟುವಟಿಕೆ ನಡೆಸುತ್ತೇವೆ. ಪೆಟಾ ನೂರಕ್ಕೆ ನೂರು ಪ್ರತಿಶತ ಭಾರತೀಯ ಸಂಸ್ಥೆ. ನಮಗೂ ಅಮೆರಿಕದ ಪೆಟಾ ಸಂಸ್ಥೆಗೂ ಸಬಂಧವಿಲ್ಲ. ಜಾಗತಿಕ ಸಮಾವೇಶಗಳಲ್ಲಿ ಒಂದೆಡೆ ಸೇರುತ್ತೇವೆ, ಅಷ್ಟೆ. ನಾವು ಮೂಲತಃ ಪ್ರಾಣಿಗಳ ಜೀವಿಸುವ ಹಕ್ಕುಗಳಿಗಾಗಿ ಹೋರಾಡುತ್ತೇವೆ. ಜಲ್ಲಿಕಟ್ಟು ನಿಷೇಧಿಸಿರುವುದು ಪೆಟಾ ಅಲ್ಲ. ಈ ಕ್ರೀಡೆಯಲ್ಲಿ ಪ್ರಾಣಿಗಳಿಗೆ ಮತ್ತು ಸ್ಪರ್ಧಿಗಳಿಗೆ ತೀವ್ರವಾದ ಗಾಯಗಳಾಗುತ್ತವೆ, ಅಪಾಯ ಇರುತ್ತದೆ ಎಂಬ ನಮ್ಮ ದೂರಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಕಳುಹಿಸಿದ ಸಮಿತಿಯ ವರದಿಯನ್ನಾಧರಿಸಿ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ವೃಥಾ ಆರೋಪ ಸಲ್ಲದು.

  • ಜಲ್ಲಿಕಟ್ಟು ನಿಷೇಧಿಸಿದರೆ ಇದರಲ್ಲಿ ಪಾಲ್ಗೊಳ್ಳುವ ಆಕಳಿನ ದೇಸಿ ತಳಿ ನಶಿಸುತ್ತದೆ ಎಂಬ ವಾದ ಮಂಡಿಸಲಾಗುತ್ತಿದೆ. ಏನನ್ನುತ್ತೀರಿ ?

ಪೆಟಾ ಒಂದು ಸಸ್ಯಾಹಾರ ಪ್ರಚೋದಿಸುವ ಸಂಘಟನೆ. ವಿಶ್ವಾದ್ಯಂತ ನಾವು ಹಸುವಿನ ಹಾಲಿನ ಬದಲು ತೆಂಗಿನ ಹಾಲು, ಬಾದಾಮಿ ಹಾಲು ಮತ್ತು ಸಸ್ಯಾಧಾರಿತ ಪೇಯವನ್ನು ಬಳಸಲು ಉತ್ತೇಜಿಸುತ್ತೇವೆ. ಇಲ್ಲಿ ಯಾವುದೇ ಪ್ರಾಣಿಯ ಸಂತತಿಯನ್ನು ಅಳಿಸಿ ಹಾಕುವ ಹುನ್ನಾರ ಇಲ್ಲ.

  • ಜಲ್ಲಿಕಟ್ಟು ನಿಷೇಧಿಸುವುದರಿಂದ ತಮಿಳುನಾಡಿನ ಸಂಸ್ಕøತಿ ಮತ್ತು ಅನನ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಆರೋಪಿಸಲಾಗುತ್ತಿದೆ . ಇದು ಸರಿಯೇ ?

ಪೆಟಾದ ಚಟುವಟಿಕೆಗಳಿಗೆ ಹೋಲಿಸಿದರೆ ಇದು ಗೌಣ ವಿಚಾರ. ನಾವು ಕುದುರೆ ಗಾಡಿಯನ್ನು ನಿಷೇಧಿಸುವಂತೆಯೂ ಕೋರಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ನಾನು ಜಲ್ಲಿಕಟ್ಟು ಕ್ರೀಡೆಯನ್ನು ಸ್ವತಃ ನೋಡಿಲ್ಲ. ಆದರೆ ವಿಡಿಯೋ ನೋಡಿದ್ದೇನೆ. ಗಾಬರಿಗೊಂಡ ಪ್ರಾಣಿ ಜನರಿಂದ ಓಡಿ ಹೋಗಲು ಯತ್ನಿಸುವುದನ್ನು ನೋಡಿದಾಗ ಆ ಪ್ರಾಣಿಗೆ ಆಗುವ ಹಿಂಸೆ ಮುಖ್ಯವಾಗಿ ಕಾಣುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅನೇಕ ವ್ಯಕ್ತಿ ಸಂಘಟನೆಗಳು ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ಬೆಂಬಲ ನೀಡುತ್ತಿವೆ. ಅನೇಕ ಮಹಿಳಾ ಸಂಘಟನೆಗಳೂ ನಮ್ಮನ್ನು ಬೆಂಬಲಿಸಿದ್ದು ವರದಕ್ಷಿಣೆ ಪಿಡುಗು, ಸತಿಪದ್ಧತಿಯಂತೆ ಈ ಕ್ರೀಡೆಯೂ ಕ್ರೌರ್ಯದ ಸಂಕೇತ ಎಂದು ಭಾವಿಸುತ್ತಾರೆ. ಜಲ್ಲಿಕಟ್ಟು ಕ್ರೀಡೆಯಲಿ ತೊಡಗಿಸಿಕೊಂಡಿದ್ದ ಕುಟುಂಬವೊಂದರ ಸದಸ್ಯ ನಾಗರಾಜು ಸಲ್ಲಿಸಿದ ಅರ್ಜಿ ಇಂದು ಕೋರ್ಟ್ ತೀರ್ಪಿಗೆ ಮೂಲವಾಗಿದೆ. ಪೆಟಾ ಸಂಘಟನೆಯನ್ನೇ ದೂಷಿಸುವುದು ನ್ಯಾಯಯುತವಲ್ಲ.